ನವದೆಹಲಿ: ರಕ್ಷಣಾ ವ್ಯವಹಾರದ ವೇಳೆ ಈಗ ಇದ್ದ ಆಫ್‌ಸೆಟ್ ನಿಯಮವನ್ನೇ ಕೈಬಿಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
36 ರಫೇಲ್ ಯುದ್ಧ ವಿಮಾನ ಸಂಬಂಧ 59 ಸಾವಿರ ಕೋಟಿ ರೂ. ಒಪ್ಪಂದ ನಡೆದು 5 ವಿಮಾನ ಭಾರತಕ್ಕೆ ಬಂದರೂ ಡಸಾಲ್ಟ್ ಕಂಪನಿ ತನ್ನ ಆಫ್‍ಸೆಟ್ ನಿಯಮ ಪಾಲನೆ ಮಾಡಿಲ್ಲ ಎಂದು ಮಹಾಲೇಖಪಾಲರ(ಸಿಎಜಿ) ವರದಿ ಉಲ್ಲೇಖಿಸಿತ್ತು. ಸಂಸತ್ತಿನಲ್ಲಿ ಸಿಎಜಿ ವರದಿ ಮಂಡನೆಯ ಬೆನ್ನಲ್ಲೇ ಕೇಂದ್ರ ಸರ್ಕಾರ ಈಗ ರಕ್ಷಣಾ ಖರೀದಿ ನಿಯಮಗಳಿಗೆ ಬದಲಾವಣೆ ಮಾಡಿದೆ.
ಈ ವಿಷಯದ ಬಗ್ಗೆ ಪ್ರತಿಕ್ರಿಯಿಸಿದ ವಿಶೇಷ ಕಾರ್ಯದರ್ಶಿ ಮತ್ತು ಮಹಾನಿರ್ದೇಶಕ (ಸ್ವಾಧೀನ) ಅಪೂರ್ವ ಚಂದ್ರ ಅವರು, ನಾವು ಆಫ್‌ಸೆಟ್ ಮಾರ್ಗಸೂಚಿಗಳಲ್ಲಿ ಬದಲಾವಣೆಗಳನ್ನು ಮಾಡಿದ್ದೇವೆ. ಈಗ ಸರ್ಕಾರದಿಂದ ಸರಕಾರದ ನಡುವೆ ಮತ್ತು ಒಂದೇ ಕಂಪನಿಯಿಂದ ರಕ್ಷಣಾ ಸಾಮಾಗ್ರಿ ಖರೀದಿ ವೇಳೆ ಆಫ್‌ಸೆಟ್ ನಿಯಮಗಳು ಇರುವುದಿಲ್ಲ ಎಂದು ಎಂದು ತಿಳಿಸಿದ್ದಾರೆ.
ಈ ನಿಯಮಗಳು ಖರೀದಿಗೆ ಅಡ್ಡಿಯಾಗುತ್ತದೆ ಮತ್ತು ಯಾವುದೇ ಉದ್ದೇಶವನ್ನು ಸಾಧಿಸುತ್ತಿಲ್ಲ. ಹೀಗಾಗಿ ನಿಯಮವನ್ನು ಬದಲಾವಣೆ ಮಾಡಲಾಗಿ ಎಂದು ಸರ್ಕಾರ ನಿರ್ಧಾರವನ್ನು ಸಮರ್ಥಿಸಿಕೊಂಡಿದೆ. ಇದನ್ನೂ ಓದಿ: ರಫೇಲ್ ತೀರ್ಪಿನಲ್ಲಿ ಸಿಎಜಿ ಉಲ್ಲೇಖ: ತಿದ್ದುಪಡಿಗಾಗಿ ಕೇಂದ್ರದಿಂದ ಅಫಿಡವಿಟ್
ರಕ್ಷಣಾ ಖರೀದಿ ವೇಳೆ ವಿದೇಶಿ ಕಂಪನಿಗಳೊಂದಿಗೆ ಆಫ್‌ಸೆಟ್ ನೀತಿಯನ್ನು 2005ರಲ್ಲಿ ಭಾರತ ಸರ್ಕಾರ ಜಾರಿಗೆ ತಂದಿದೆ. 300 ಕೋಟಿ ರೂ.ಗೂ ಅಧಿಕ ಮೊತ್ತದ ರಕ್ಷಣಾ ವಸ್ತುಗಳ ಖರೀದಿಯ ವೇಳೆ ವಿದೇಶಿ ಕಂಪನಿ ಕನಿಷ್ಟ ಶೇ.30 ರಷ್ಟು ಹೂಡಿಕೆಯನ್ನು ಭಾರತದಲ್ಲಿ ಮಾಡಬೇಕು ಮತ್ತು ತಂತ್ರಜ್ಞಾನವನ್ನು ವರ್ಗಾವಣೆ ಮಾಡಬೇಕು ಎಂಬ ನಿಯಮ ವಿಧಿಸಲಾಗಿತ್ತು.
ದೇಶೀಯವಾಗಿ ರಕ್ಷಣಾ ಸಲಕರಣೆಗೆ ಉತ್ಪಾದನೆಗೆ ಉತ್ತೇಜನ ನೀಡಲು ಈ ನಿಯಮವನ್ನು ತರಲಾಗಿತ್ತು. ರಫೇಲ್ ಖರೀದಿಯಲ್ಲಿ ಆಫ್‌ಸೆಟ್ ನಿಯಮವನ್ನು ಶೇ.50ರಷ್ಟುಎಂದು ನಿಗದಿ ಮಾಡಲಾಗಿತ್ತು.