ಬಳ್ಳಾರಿ: ಪ್ರಸ್ತುತ ರಣಹದ್ದುಗಳ ಸಂತತಿ ಕ್ರಮೇಣ ಕ್ಷೀಣಿಸುತ್ತಿರುವ ಹಿನ್ನೆಲೆಯಲ್ಲಿ ರಣಹದ್ದುಗಳ ಸಂತತಿ ರಕ್ಷಣೆ ಸಲುವಾಗಿ ರಾಮನಗರದಲ್ಲಿ 2 ಕೋಟಿ ರೂ. ವೆಚ್ಚದಲ್ಲಿ ರಣಹದ್ದು ಫೀಡಿಂಗ್ ಕ್ಯಾಂಪ್ ನಿರ್ಮಿಸಲಾಗುತ್ತಿದೆ ಎಂದು ಅರಣ್ಯ ಸಚಿವ ಬಿ.ಎಸ್.ಆನಂದ್‍ಸಿಂಗ್ ಹೇಳಿದ್ದಾರೆ.
ಜಿಲ್ಲೆಯ ಹೊಸಪೇಟೆ ಸಮೀಪದ ಕಮಲಾಪುರ ಪಟ್ಟಣದ ಅಟಲ್ ಬಿಹಾರಿ ವಾಜಪೇಯಿ ಝೂಲಾಜಿಕಲ್ ಪಾರ್ಕ್ ಆವರಣದಲ್ಲಿ ವಲಯ ಅರಣ್ಯ ಇಲಾಖೆ ಏರ್ಪಡಿಸಿದ್ದ 66ನೇ ವನ್ಯಜೀವಿ ಸಪ್ತಾಹ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಅರಣ್ಯ ರಕ್ಷಣೆ ಭಾವನೆ ಸಾರ್ವಜನಿಕರಲ್ಲಿ ಸ್ವಯಂಕೃತವಾಗಿ ಮೂಡಬೇಕು, ಪ್ರಸ್ತುತ ದಿನಗಳಲ್ಲಿ ಪ್ರಕೃತಿಯನ್ನು ಕಾಣುವ ಹಾಗೂ ಬೆಳೆಸುವ ಮನಸ್ಥಿತಿ ಬದಲಾಗಬೇಕಿದೆ.
ಇಲಾಖೆಯಲ್ಲಿ ಅಧಿಕಾರಿಗಳ ಮೇಲೆ ಆರೋಪ ಹೆಚ್ಚು, ಇದನ್ನು ಸವಾಲಾಗಿ ಸ್ವೀಕರಿಸಿ ಇಲಾಖೆಯ ಅಧಿಕಾರಿಗಳು ಅರಣ್ಯ ರಕ್ಷಣೆ ಜೊತೆ ಸಾರ್ವಜನಿಕರ ಜೊತೆ ಸ್ನೇಹ ಸಂಬಂಧ ಕೂಡ ಬೆಳೆಸಿಕೊಳ್ಳಬೇಕು. ಬಂಡೀಪುರ ಅರಣ್ಯ ಪ್ರದೇಶದ ಹಾಡಿಗಳಲ್ಲಿರುವ ಗುಂಪುಗಳೇ ಇಂದಿಗೂ ಅರಣ್ಯ ರಕ್ಷಣೆಯನ್ನು ಮಾಡುತ್ತಿವೆ. ಅವರ ಜೊತೆ ಎಲ್ಲರಿಗೂ ಅರಣ್ಯ ರಕ್ಷಣೆಯ ಕಲ್ಪನೆ ಹಾಗೂ ಕರ್ತವ್ಯ ಮೂಡಬೇಕು ಎಂದರು.
ಅರಣ್ಯ ಸಚಿವನಾಗಿ ಸರಂಕ್ಷಣಾ ಸಪ್ತಾಹ ಕಾರ್ಯಕ್ರಮವನ್ನು ಬೆಂಗಳೂರಿನಲ್ಲಿ ನೆರವೇರಿಸಬೇಕಿತ್ತು. ಅರಣ್ಯ ಸಚಿವನಾಗಿ ಮೊದಲ ಕಾರ್ಯಕ್ರಮವಾದ್ದರಿಂದ ಸ್ವಕ್ಷೇತ್ರದಲ್ಲೇ ನೆರವೇರಿಸುವ ಇಚ್ಛೆಯಿಂದ ತಾಲೂಕಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದೇನೆ ಎಂದರು.
ರಣಹದ್ದುಗಳ ರಕ್ಷಣೆಯೇ ಈ ವರ್ಷ ಸಪ್ತಾಹದ ಧ್ಯೇಯ ವಾಕ್ಯವಾಗಿದೆ. ಜಗತ್ತಿನ 97 ಭಾಗ ಭೂಮಿಯನ್ನು ಮನುಷ್ಯರು ಆಕ್ರಮಿಸಿ ಉಳಿದ 3 ಭಾಗ ಮಾತ್ರ ವನ್ಯಜೀವಿಗಳು ಹೊಂದಿವೆ. ಪ್ರಸ್ತುತ ಮನುಷ್ಯನಿಗೆ ಬಾಧಿಸುತ್ತಿರುವ ಸಾಂಕ್ರಾಮಿಕ ರೋಗಗಳನ್ನು ಮನುಷ್ಯನೇ ಅತಿಯಾಸೆಯಿಂದ ತಂದುಕೊಂಡದ್ದಾಗಿದೆ. ಮನುಷ್ಯ ತನ್ನ ಆರೋಗ್ಯದ ಕಾಳಜಿ ಜೊತೆ ಪರಿಸರದ ಕಾಳಜಿಯನ್ನು ಹೊಂದಿದಾಗ ಉತ್ತಮ ಜೀವನವನ್ನು ರೂಪಿಸಿಕೊಳ್ಳಲು ಸಾಧ್ಯ ಎಂದರು.