ಚೆನ್ನೈ: ಖ್ಯಾತ ನಟ ರಜನಿಕಾಂತ್ ರಾಜಕೀಯ ಪ್ರವೇಶಿಸುವ ಕುರಿತು ಹಲವು ವರ್ಷಗಳಿಂದ ಚರ್ಚೆ ನಡೆಯುತ್ತಲೇ ಇದೆ. ಇದೆಲ್ಲದರ ನಡುವೆ ಹಲವು ಊಹಾಪೋಹಗಳು ಸಹ ಹಬ್ಬುತ್ತಿದ್ದು, ರಜನಿ ರಾಜಕೀಯ ತೊರೆಯುವ ಪತ್ರವೊಂದು ವೈರಲ್ ಆಗಿದೆ. ಇದಕ್ಕೆ ಸ್ವತಃ ರಜನಿಕಾಂತ್ ಅವರೇ ಸ್ಪಷ್ಟನೆ ನೀಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಪತ್ರ ನಕಲಿ. ಅದರಲ್ಲಿರುವುದು ನಿಜವಾದ ಅಂಶವಲ್ಲ, ಆರೋಗ್ಯ ಕುರಿತು ನೀಡಿರುವ ಮಾಹಿತಿ ಮಾತ್ರ ನಿಜ ಎಂದಿದ್ದಾರೆ. ಈ ಮೂಲಕ ರಜನಿ ರಾಜಕೀಯದಿಂದ ದೂರವಾಗಲಿದ್ದಾರೆ ಎಂಬ ಪತ್ರದ ಕುರಿತು ಸ್ಪಷ್ಟನೆ ನೀಡಿದ್ದಾರೆ. ಸಕ್ರಿಯ ರಾಜಕೀಯದ ಕುರಿತು ಮುಂದಿನ ದಿನಗಳಲ್ಲಿ ಸ್ಪಷ್ಟಪಡಿಸುತ್ತೇನೆ ಎಂದಿದ್ದಾರೆ.
Advertisement
Advertisement
ರಜನಿ ಟ್ವೀಟ್‍ನಲ್ಲೇನಿದೆ?
ನನ್ನ ಹೇಳಿಕೆಯಂತೆಯೇ ಇರುವ ಪತ್ರ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಅದು ನನ್ನ ಹೇಳಿಕೆಯಲ್ಲ, ನನ್ನ ಆರೋಗ್ಯ ಮತ್ತು ವೈದ್ಯರು ಸಲಹೆ ನೀಡಿರುವ ಕುರಿತ ಅಂಶಗಳು ಮಾತ್ರ ಸತ್ಯ. ರಾಜಕೀಯದ ಕುರಿತ ಮಾಹಿತಿ ಸುಳ್ಳು. ನನ್ನ ರಜಿನಿ ಮಕ್ಕಳ್ ಮಂದಿರದ ಸದಸ್ಯರೊಂದಿಗೆ ಸಮಾಲೋಚಿಸಿದ ನಂತರ ನನ್ನ ರಾಜಕೀಯ ನಿಲುವಿನ ಬಗ್ಗೆ ಪ್ರಕಟಣೆ ನೀಡುತ್ತೇನೆ ಎಂದು ಸ್ಪಷ್ಟಪಡಿಸಿದ್ದಾರೆ.
Advertisement
— Rajinikanth (@rajinikanth) October 29, 2020
Advertisement
ವೈರಲ್ ಆದ ಪತ್ರದಲ್ಲೇನಿದೆ?
ಜೀವನಕ್ಕೆ ಹೆದರುವುದಿಲ್ಲ, ಜನರ ಏಳಿಗೆ ಬಗ್ಗೆ ಹೆಚ್ಚು ಕಾಳಜಿ ಇದೆ. ಭರವಸೆ ನೀಡಿದಂತೆ ರಾಜಕೀಯ ಬದಲಾವಣೆಗಾಗಿ, ರಾಜಕೀಯದಲ್ಲಿ ಸಕ್ರಿಯವಾಗಿ ತೊಡಗಿಕೊಳ್ಳಬೇಕಿದೆ. ನನ್ನ ಆರೋಗ್ಯ ಹದಗೆಟ್ಟರೆ, ರಾಜಕೀಯ ನನಗೆ ಸವಾಲು ಎನಿಸಬಹುದು. ಜನವರಿ 15ರೊಳಗೆ ಪಕ್ಷ ಪ್ರಾರಂಭಿಸಬೇಕು. ಹೀಗಾಗಿ ಡಿಸೆಂಬರ್‍ನಲ್ಲಿಯೇ ನನ್ನ ನಿರ್ಧಾರ ಘೋಷಿಸಬೇಕಿದೆ. ಇಂತಹ ಪರಿಸ್ಥಿತಿಯಲ್ಲಿ ನಾನು ಏನು ಮಾಡಬೇಕೆಂಬ ನಿರ್ಧಾರ ಕೈಗೊಳ್ಳಲು ಅಭಿಮಾನಿಗಳಿಗೆ ಮತ್ತು ಜನರಿಗೆ ಬಿಡುತ್ತೇನೆ. ಜನರ ತೀರ್ಪು ದೇವರ ತೀರ್ಪು, ಜೈ ಹಿಂದ್ ಎಂದು ಪತ್ರದಲ್ಲಿ ಬರೆಯಲಾಗಿದೆ.
ರಜನಿಕಾಂತ್ ರಾಜಕೀಯಕ್ಕೆ ಆಗಮಿಸುವ ಕುರಿತು 2017ರಲ್ಲೇ ಘೋಷಣೆ ಮಾಡಿದ್ದಾರೆ. ಅಲ್ಲದೆ ತಮ್ಮದೇ ಸ್ವಂತ ಪಕ್ಷ ಕಟ್ಟಿ ರಾಜಕೀಯದಲ್ಲಿ ಬದಲಾವಣೆ ತರುವುದಾಗಿ ಸಹ ತಿಳಿಸಿದ್ದರು. ಆದರೆ ನಂತರ ಈ ಬಗ್ಗೆ ಹೆಚ್ಚು ಅಪ್‍ಡೇಟ್ ಸಿಕ್ಕಿಲ್ಲ. ಲೋಕಸಭಾ ಚುನಾವಣೆ ವೇಳೆ ಸಹ ರಾಜಕೀಯದ ಕುರಿತು ತಮ್ಮ ನಿರ್ಧಾರ ಘೋಷಿಸಲಿದ್ದಾರೆ ಎಂದು ಸುದ್ದಿಯಾಗಿತ್ತು. ಆದರೆ ರಜನಿಕಾಂತ್ ಇನ್ನೂ ಸಮಯ ಬೇಕು ಎಂದರು. ಇದೆಲ್ಲದರ ಮಧ್ಯೆ ಬಿಜೆಪಿ ಸೇರಲಿದ್ದಾರೆ ಎಂಬ ಅಂಶ ಸಹ ಚರ್ಚೆಗೆ ಬಂದಿತ್ತು. ಆದರೆ ರಾಜಕೀಯಕ್ಕೆ ಆಗಮಿಸುವ ಕುರಿತು ಘೋಷಣೆ ಮಾಡಿ ಮೂರು ವರ್ಷದ ಕಳೆದರೂ ಈ ವರೆಗೆ ಯಾವುದೇ ಬೆಳವಣಿಗೆ ಕಂಡುಬಂದಿಲ್ಲ. ಹೀಗಾಗಿ ರಜನಿ ರಾಜಕೀಯದಿಂದ ಹಿಂದೆ ಸರಿಯಲಿದ್ದಾರೆ ಎಂಬ ಚರ್ಚೆ ನಡೆಯುತ್ತಿದೆ.