ಹಾವೇರಿ: ರಕ್ತದಾನದ ಮೂಲಕವಾಗಿ ಹಾವೇರಿಯಲ್ಲಿ ವೈದ್ಯರಿಂದ ವಿಶ್ವ ರಕ್ತದಾನಿಗಳ ದಿನಾಚರಣೆಯನ್ನು ಆಚರಿಸಲಾಯಿತ್ತು.
ಜಿಲ್ಲಾ ಆಸ್ಪತ್ರೆಯಲ್ಲಿ ಶುಕ್ರವಾರ ವಿಶ್ವ ರಕ್ತದಾನಿಗಳ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಡಾ.ಪಿ.ಆರ್.ಹಾವನೂರ ಅವರು, ಕೇವಲ 350 ಮಿಲಿ ರಕ್ತದಾನ ಮಾಡಿ ತುರ್ತು ಪ್ರಾಣಾಪಾಯದಲ್ಲಿರುವವರಿಗೆ ಜೀವ ಸಂಜೀವಿನಿಯಾಗಿ. ರಕ್ತವನ್ನು ಕೃತಕವಾಗಿ ತಯಾರಿಸಲು ಸಾಧ್ಯವಿಲ್ಲ. ಆರೋಗ್ಯವಂತ ಮಾನವ ದೇಹದಲ್ಲಿ ಸುಮಾರು ಐದರಿಂದ ಆರು ಲೀಟರ್ ರಕ್ತದ ಉತ್ಪತ್ತಿ ನಿರಂತರವಾಗಿರುತ್ತದೆ. ಆರೋಗ್ಯವಂತ ಯುವ ಜನಾಂಗ ರಕ್ತದಾನಕ್ಕೆ ಮುಂದಾಗಬೇಕು ಎಂದು ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಪಿ.ಆರ್.ಹಾವನೂರ ಅವರು ಹೇಳಿದರು.
ರಕ್ತ ಕೇಂದ್ರದ ವೈದ್ಯಾಧಿಕಾರಿ ಡಾ.ಬಸವರಾಜ ತಳವಾಳ ಅವರು ಮಾತನಾಡಿ, ಜಿಲ್ಲೆಯಲ್ಲಿ ರಕ್ತದಾನದ ಕುರಿತು ಅರಿವು ಮೂಡಿಸುವುದು ಅತ್ಯಗತ್ಯವಾಗಿದೆ.ಆರೋಗ್ಯವಂತರ ಯುವಜನಾಂಗ ರಕ್ತದಾನ ಮಾಡುವ ಮೂಲಕ ತುರ್ತು ಪ್ರಾಣಾಪಾಯದಲ್ಲಿರುವ ರೋಗಿಗಳ ಪ್ರಾಣ ಉಳಿಸಲು ಮುಂದಾಗಬೇಕು ಎಂದು ಕರೆ ನೀಡಿದರು. ರಕ್ತ ಕೇಂದ್ರದ ತಾಂತ್ರಿಕ ಅಧಿಕಾರಿ ಬಸವರಾಜ ಕಮತದ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಅತೀ ಹೆಚ್ಚು ರಕ್ತದಾನ ಮಾಡಿದ ಸತೀಶ ಗೌಳಿ ಹಾಗೂ ವಿನಾಯಕ ಓಂಕಾರಣ್ಣನವರ ಅವರನ್ನು ಸನ್ಮಾನಿಸಲಾಯಿತು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಚ್.ಎಸ್.ರಾಘವೇಂದ್ರಸ್ವಾಮಿ, ಸ್ಥಾನಿಕ ವೈದ್ಯಾಧಿಕಾರಿ ಡಾ.ಸುರೇಶ್ ಪೂಜಾರ, ಡಾ. ನೀಲೇಶ್ ಇತರರು ಉಪಸ್ಥಿತರಿದ್ದರು.