ಚಂದನವನದ ಅಂಗಳಕ್ಕೆ ದಿನ ಕಳೆದಂತೆ ಚೆಂದದ ನಟಿಯರು ಎಂಟ್ರಿಯಾಗುತ್ತಲೇ ಇದ್ದಾರೆ. ಕಪ್ಪು ಬಿಳಿ ಕಣ್ಣಲ್ಲಿ ಕಲರ್ ಫುಲ್ ಕನಸುಗಳನ್ನು ಹೊತ್ತು ಬಣ್ಣದ ಲೋಕದಲ್ಲಿ ಅದೃಷ್ಟ ಪರೀಕ್ಷೆಗಿಳಿಯುತ್ತಾರೆ. ಇಲ್ಲಿ ಗ್ಲಾಮರ್ ಜೊತೆಗೆ ಪ್ರತಿಭೆ ಹಾಗೂ ಅದೃಷ್ಟ ಇದ್ದವರು ಮಾತ್ರ ಗಟ್ಟಿಯಾಗಿ ನೆಲೆಯೂರುತ್ತಾರೆ. ಕೊಟ್ಟ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಒಂದೊಂದೇ ಮೆಟ್ಟಿಲು ಹತ್ತಿ ಗೆಲುವಿನ ಹಾದಿ ತುಳಿಯುತ್ತಾರೆ. ಇಂತಹ ನಟಿಯರ ಪೈಕಿ ಸದ್ಯ ಸ್ಯಾಂಡಲ್‍ವುಡ್ ನಲ್ಲಿ ಸಖತ್ ಸದ್ದು-ಸುದ್ದಿ ಮಾಡುತ್ತಿರುವ ನಟಿ ಐಶ್ವರ್ಯ ರಾವ್.
ಐಶ್ವರ್ಯ ರಾವ್ ಅಪ್ಪಟ ಕನ್ನಡದ ಹುಡುಗಿ, ಮೂಲತಃ ಉಡುಪಿಯವರಾದರು ಹುಟ್ಟಿ ಬೆಳೆದಿದ್ದೆಲ್ಲವೂ ಅರಮನೆ ನಗರಿ ಮೈಸೂರಿನಲ್ಲಿ. ಅಂತರಾಷ್ಟ್ರೀಯ ನೃತ್ಯಪ್ರಕಾರಗಳಲ್ಲಿ ಪರಿಣಿತಿ ಹೊಂದಿರುವ ಐಶ್ವರ್ಯ ಡ್ಯಾನ್ಸ್ ನೋಡಿದವರು ಸಿನಿಮಾ ಒಂದಕ್ಕೆ ಅವಕಾಶ ನೀಡಿದರು. ಮೈಮ್ ರಮೇಶ್ ಬಳಿಕ ನಟನೆ ಕಲಿಯುತ್ತಿದ್ದ ಐಶ್ವರ್ಯ, ಸಿಕ್ಕ ಅವಕಾಶ ಕೈ ಚೆಲ್ಲದೆ ಬಣ್ಣ ಹಚ್ಚಲು ಒಪ್ಪಿಕೊಂಡರು. ಅಲ್ಲಿಂದ ಶುರುವಾದ ಐಶ್ವರ್ಯ ಬಣ್ಣದ ಬದುಕು ಇಂದು ಸಖತ್ ಕಲರ್ ಫುಲ್ ಆಗಿದೆ. ಒಂದರ ಹಿಂದೊಂದೆ ಅವಕಾಶಗಳು ಇವರನ್ನು ಹರಸಿ ಬರುತ್ತಿವೆ.
ಪವನ್ ಪ್ರಸಾದ್ ನಿರ್ದೇಶನ ಬಡ್ಡಿ ಮಗನ್ ಲೈಫು ಸಿನಿಮಾದ ಮೂಲಕ ಐಶ್ವರ್ಯ ರಾವ್ ನಟಿಯಾಗಿ ಸ್ಯಾಂಡಲ್‍ವುಡ್‍ಗೆ ಪಾದಾರ್ಪಣೆ ಮಾಡಿದರು. ಮೊದಲ ನಟನೆಯಲ್ಲಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾದ ಐಶ್ವರ್ಯಗೆ ನಟ ಬಲರಾಜ್ ವಾಡಿ ಅವರಿಂದ ಮತ್ತೊಂದು ಸಿನಿಮಾದ ಅವಕಾಶ ಒದಗಿ ಬಂತು. ಮಧುಚಂದ್ರ ನಿರ್ದೇಶನದ ಭೂಗತ ಲೋಕ ಹಂದರ ಹೊಂದಿರುವ ಸಿನಿಮಾ ರವಿ ಹಿಸ್ಟರಿಯಲ್ಲಿ ನಾಯಕಿಯಾಗಿ ಬಣ್ಣ ಹಚ್ಚಿದರು. ಆ ಬಳಿಕ ಹಳ್ಳಿಸೊಗಡಿನ ಕಥೆಹೊಂದಿರುವ ರಣಹೇಡಿ ಸಿನಿಮಾದಲ್ಲಿ ಕರ್ಣ ಕುಮಾರ್ ಗೆ ಜೋಡಿಯಾಗಿ ಮಿಂಚಿದರು.
ಆ ಬಳಿಕ ಧನಂಜಯ್ ರಂಜನ್ ನಿರ್ದೇಶನ ಮೈಸೂರ್ ಡೈರೀಸ್ ಸಿನಿಮಾದಲ್ಲಿ ನಟಿಸಿದರು. ಸದ್ಯ ಮಂಜೇಶ್ ಬಾಗಾವತ್ ನಿರ್ದೇಶನದ ಕ್ರೀಡಾ ಆಧಾರಿತ ಸಹರ ಸಿನಿಮಾದಲ್ಲಿ ನಟಿಸಿದ್ದು, ಸಿನಿಮಾದ ಶೂಟಿಂಗ್ ಮುಕ್ತಾಯ ಹಂತಕ್ಕೆ ಬಂದಿದೆ. ಇದರ ಜೊತೆಗೆ ಶಿವ ಪ್ರಭು ನಿರ್ದೇಶನದ ನಿಮ್ಮ ಕರೆ ನಿರೀಕ್ಷಣೆಯಲ್ಲಿದೆ ಸಿನಿಮಾದಲ್ಲಿಯೂ ನಟಿಸುತ್ತಿದ್ದಾರೆ.
ಸದ್ಯ ಐಶ್ವರ್ಯ ನಟನೆಯ ಎರಡು ಮೂರು ಸಿನಿಮಾಗಳು ರಿಲೀಸ್‍ಗೆ ರೆಡಿಯಾಗಿವೆ. ಈ ನಡುವೆ ಓಂ ಪ್ರಕಾಶ್ ರಾವ್ ನಿರ್ದೇಶನ ಮಾಡಲಿರುವ ಇಲಾಖೆ ಸಿನಿಮಾಕ್ಕೂ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಈ ಚಿತ್ರದಲ್ಲಿ ವಿಭಿನ್ನ ಪಾತ್ರದ ಮೂಲಕ ಪ್ರೇಕ್ಷಕರ ಎದುರು ಬರಲಿದ್ದಾರಂತೆ ಐಶ್ವರ್ಯ.
ಐಶ್ವರ್ಯ ನಟನೆ ಒಂದು ಕಡೆಯಾದರೆ ಅವರು ಯೋಗ ಶಿಕ್ಷಕಿ. ಮೈಸೂರಿಗೆ ಬರುವ ವಿದೇಶಿ ಪ್ರವಾಸಿಗರಿಗೆ ಉಚಿತವಾಗಿ ಅಷ್ಟಾಂಗ ವಿನ್ಯಾಸ ಎಂಬ ಯೋಗ ಹೇಳಿಕೊಡುತ್ತಾರೆ. ಅದೇನೆ ಇರಲಿ ಇಂದು ಐಶ್ವರ್ಯ ರಾವ್ ಕನ್ನಡದ ಸಿನಿಮಾ ಲೋಕದಲ್ಲಿ ಭರವಸೆ ನಟಿಯಾಗಿ ಮಿಂಚುತ್ತಿದ್ದಾರೆ. ಅಲ್ಲದೇ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಯಾವುದೇ ಪಾತ್ರ ಕೊಟ್ಟರು ನಟಿಸುತ್ತೇನೆ ಎನ್ನುವ ಐಶ್ವರ್ಯ ಸ್ಟಾರ್ ಹೀರೋಗಳ ಜೊತೆ ಮಿಂಚಬೇಕು ಎಂಬ ಹಂಬಲವಿದೆ. ಪ್ರತಿಭಾನ್ವಿತೆಯಾಗಿರುವ ಐಶ್ವರ್ಯ ರಾವ್‍ಗೆ ಕಮರ್ಷಿಯಲ್ ಸಿನಿಮಾ ಸೇರಿದಂತೆ ಒಳ್ಳೊಳ್ಳೆ ಸಿನಿಮಾಗಳು ಅವರನ್ನು ಹರಸಿ ಬರಲಿ.