ಹುಬ್ಬಳ್ಳಿ: ಸಚಿವ ಯೋಗೇಶ್ವರ್ ಮೇಲೆ ಮೆಗಾಸಿಟಿ ಪ್ರಕರಣದಲ್ಲಿ 9731 ಕೇಸ್‍ಗಳಿವೆ. ಈ ಕುರಿತಾಗಿ ದೆಹಲಿಯಲ್ಲಿ ಪ್ರಕರಣ ವಿಚಾರಣೆ ನಡೆಯುತ್ತಿದೆ. ಗ್ರಾಹಕರ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿದೆ. ಜೈಲಿಗೆ ಹೋಗುವ ವ್ಯಕ್ತಿಯನ್ನ ಮಂತ್ರಿ ಮಾಡಬೇಕಾ..? ಯೋಗೇಶ್ವರ್ ಪ್ರಕರಣ ಸದ್ಯ ಸ್ಟೇ ಆಗಿದೆ. ಸ್ಟೇ ಕ್ಲೀಯರ್ ಆದರೆ ಅವರು ಜೈಲಿಗೆ ಹೋಗುವ ಸಾಧ್ಯತೆಯಿದೆ ಎಂದು ಎಂಎಲ್‍ಸಿ ಎಚ್ ವಿಶ್ವನಾಥ್ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜೀನಾಮೆ ಕೊಟ್ಟು ನಾವು ಕೂಡ ರಾಜ್ಯಪಾಲರ ಬಳಿ ಹೋದವರು, ನಮ್ಮದು ಪಕ್ಷಾಂತರ ಅಲ್ಲ. ನಾನು 40 ವರ್ಷಗಳಿಂದ ರಾಜಕೀಯದಲ್ಲಿ ಇರುವವನು. ಯಡಿಯೂರಪ್ಪರಿಗೆ ಅಧಿಕಾರದ ಮೋಹ ಇದೆ ಎಂದು ವಾಗ್ದಾಳಿ ನಡೆಸಿದರು.
ರಮೇಶ್ ಜಾರಕಿಹೊಳಿ, ಸಿಪಿ ಯೋಗೇಶ್ವರ್ ಸಾಲ ಮಾಡಿ ಸರ್ಕಾರ ತಂದ್ರು ಅನ್ನೋದನ್ನ ಒಪ್ಪಕ್ಕೆ ಆಗುತ್ತಾ. ಮೂರು ದಿನದ ಬೆಳವಣಿಗೆ ನನಗೆ ಹೇಸಿಗೆ ತರಿಸಿದೆ. ನಾನು ಮಾತನಾಡುವುದನ್ನ ಬಿಟ್ಟು ಬರವಣಿಗೆ ಮಾಡಬೇಕು ಅನ್ನಿಸುತ್ತಿದೆ. ರಾಜ್ಯ ಸರ್ಕಾರ ಬದಲಾವಣೆ ಬಗ್ಗೆ ಪುಸ್ತಕ ಬರೆಯುವೆ. ಈಗಾಗಲೇ 8 ಅಧ್ಯಾಯಗಳು ಮುಗಿದಿವೆ. ನಾನು ಬಿಎಸ್‍ವೈಗೆ ಮಂತ್ರಿ ಮಾಡಿ ಎಂದು ಯಾವತ್ತೂ ಕೇಳಿಲ್ಲ. ನಮ್ಮಿಬ್ಬರ ಮಧ್ಯೆ ನಡೆದ ಮಾತುಕತೆ ಏನಾಯ್ತು ಅಂತ ಪ್ರಶ್ನೆ ಮಾಡುತ್ತಿರುವೆ ಎಂದರು.
ಸಿಪಿ ಯೋಗೇಶ್ವರ್ ಯಾರು..? ಅವರನ್ನ ಸಚಿವರನ್ನಾಗಿ ಮಾಡುವ ಅನಿವಾರ್ಯತೆ ಏನಿತ್ತು. ಮುನಿರತ್ನಗೆ ಸಚಿವ ಸ್ಥಾನ ನೀಡುವುದು ಬಿಟ್ಟು ಯೋಗೇಶ್ವರ್ ಗೆ ಯಾಕೆ ಕೊಡಬೇಕಿತ್ತು..? ನಾನು ಅಧಿಕಾರಕ್ಕೆ ಹಂಬಲಿಸದವನಲ್ಲ. ಸಾರಾ ಮಹೇಶ್ ಕೊಚ್ಚೆಗುಂಡಿ. ಕೊಚ್ಚೆಗುಂಡಿಗೆ ಕಲ್ಲು ಎಸೆದು ಹೊಲಸು ಮಾಡಿಕೊಳ್ಳಲು ಇಷ್ಟವಿಲ್ಲ ಎಂದರು.
ಕುರುಬ ಸಮಾಜ ಎಸ್‍ಟಿ ಮಿಸಲಾತಿಗಾಗಿ ಹೋರಾಟ ಮಾಡುತ್ತಿದೆ. ಈ ಹೋರಾಟ ನಾಲ್ವರು ಶ್ರೀಗಳು ಹಾಗೂ ಸಮಾಜದ ಮುಖಂಡರ ನೇತೃತ್ವದಲ್ಲಿ ನಡೆಯುತ್ತಿದೆ. ವೀರಶೈವ ಲಿಂಗಾಯತದವರೇ ಸಿಎಂ ಇರುವಾಗ ಲಿಂಗಾಯತ ಸಮುದಾಯ ಮೀಸಲಾತಿಗೆ ಹೋರಾಟಕ್ಕೆ ಇಳಿದಿದೆ. ರಾಜ್ಯ ಹಾಗೂ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇದೆ. ಈಶ್ವರಪ್ಪ ಮೀಸಲಾತಿ ಕೊಡಿಸಲಿ ಅನ್ನೋ ಸಿದ್ದರಾಮಯ್ಯರ ಮಾತು ಒಪ್ಪಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಬೆಳಗಾವಿಗೆ ಅಮಿತ್ ಶಾ ಆಗಮನದ ವೇಳೆ ಭೇಟಿಗೆ ಅವಕಾಶ ಕೇಳಿದ್ದೇನೆ. ಆಗ ಸಂಪುಟ ವಿಸ್ತರಣೆ ವಿಚಾರದ ಬಗ್ಗೆ ಮಾತುನಾಡುತ್ತೇನೆ. ರಾಜ್ಯದ ನಾಯಕತ್ವದ ಬಗ್ಗೆ ಚರ್ಚೆ ಮಾಡುತ್ತೇನೆ. ನಾನು ಬಿಎಸ್‍ವೈ ನಾಯಕತ್ವ ಪ್ರಶ್ನೆ ಮಾಡಲ್ಲ. ಆದರೆ ಅವರ ನಡವಳಿಕೆ ಪ್ರಶ್ನೆ ಮಾಡಬೇಕಾಗಿದೆ. ಬಿಜೆಪಿಯ ನಡವಳಿಕೆಗೆ ಬಗ್ಗೆ ಚರ್ಚೆ ಮಾಡಬೇಕಿದೆ ಎಂದರು.