ಉಡುಪಿ: ಮಲ್ಪೆ ಪೊಲೀಸರು ಯೋಗೀಶ್ ಪೂಜಾರಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಿಂಚಿನ ಕಾರ್ಯಾಚರಣೆ ಮಾಡಿ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಕೊಲೆ ನಡೆದು ಒಂದೇ ದಿನದಲ್ಲಿ ಪ್ರಕರಣವನ್ನು ಭೇಧಿಸಿದ ಪೊಲೀಸರು, ಕುಖ್ಯಾತ ರೌಡಿ ಶೀಟರ್ ಸುಜಿತ್ ಪಿಂಟೋ ಸಹಿತ ಮೂವರು ಆರೋಪಿಗಳ ಕೈಗೆ ಕೋಳ ಹಾಕಿದ್ದಾರೆ.
ಸುಜಿತ್ ಪಿಂಟೋ, ಆತನ ಸಹೋದರ ರೋಹಿತ್ ಪಿಂಟೋ, ಅಣ್ಣು ಅಲಿಯಾಸ್ ಪ್ರದೀಪ್, ವಿನಯ್ ಬಂಧಿತ ಆರೋಪಿಗಳು. ಆರೋಪಿಗಳನ್ನು ಬಂಧಿಸಿರುವ ಮಲ್ಪೆ ಪೊಲೀಸರು ಕೊಲೆ ಮಾಡಿದ ಸ್ಥಳಕ್ಕೆ ಕರೆತಂದು ಮಹಜರು ಮಾಡಿದರು.
ಲಾಕ್‍ಡೌನ್ ಸಂದರ್ಭ ಸ್ಥಳೀಯ ಶಾಲೆಯ ಜಗಲಿಯಲ್ಲಿ ಗುಂಡು ಪಾರ್ಟಿ ಮಾಡಿದ್ದಾಗ ಆ ತಂಡದ ಯುವಕನಲ್ಲಿ ಯೋಗೀಶ್ ಪೂಜಾರಿ ತಗಾದೆ ಎತ್ತಿದ್ದ. ಆ ದ್ವೇಷದಲ್ಲಿ ದೂರನ್ನು ಸುಜಿತ್ ಪಿಂಟೋನಲ್ಲಿ ಹೇಳಿಕೊಂಡಿದ್ದ ಎಂಬ ಮಾಹಿತಿಯಿದೆ. ಸೋಮವಾರ ರಾತ್ರಿ ಈ ನಾಲ್ವರ ತಂಡ ಮಾರಕಾಸ್ತ್ರಗಳಿಂದ ಇರಿದು ಕೊಂದಿದೆ. ಯೋಗೀಶ್ ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದನು.
ಕೃತ್ಯಕ್ಕೆ ಬಳಸಿದ್ದ ಕಾರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪ್ರಕರಣದ ಮತ್ತೋರ್ವ ಆರೋಪಿ ಅನೂಪ್ ತಲೆಮರೆಸಿಕೊಂಡಿದ್ದಾನೆ. ಆತನ ಬಂಧನಕ್ಕೆ ಎರಡು ತಂಡ ರಚಿಸಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.