ಬೆಂಗಳೂರು: ಯುವರಾಜ್ ಸ್ವಾಮಿ ವಿರುದ್ಧ ಸಿಸಿಬಿ ಪೊಲೀಸರು ಚಾರ್ಜ್ ಶೀಟ್ ಸಲ್ಲಿಸಿದ್ದು, ಪ್ರಮುಖ ಸಚಿವರ ಬಯೋಡೆಟಾ ಹಾಗೂ ಲೆಟರ್‍ಹೆಡ್ ಪತ್ತೆಯಾಗಿವೆ. ಅಲ್ಲದೆ ಆರೋಪಿ ಹೇಗೆ ವಂಚನೆ ಮಾಡಿದ್ದಾನೆ ಎಂಬುದರ ವಿವರವನ್ನು ಸಹ ಇದರಲ್ಲಿ ತಿಳಿಸಲಾಗಿದೆ.
ಸಿಸಿಬಿ ಪೊಲೀಸರು ಯುವರಾಜ್ ಮನೆಯ ಮೇಲೆ ದಾಳಿ ಮಾಡಿದ್ದ ವೇಳೆ ಬರೋಬ್ಬರಿ 89ಕ್ಕೂ ಹೆಚ್ಚು ದಾಖಲೆಗಳನ್ನು ಸೀಜ್ ಮಾಡಿದ್ದರು. ಯುವರಾಜ್ ನ ಪರ್ಸನಲ್ ಹಾಗೂ ಬ್ಯಾಂಕ್, ಆಸ್ತಿ ದಾಖಲೆಗಳು ಪತ್ತೆಯಾಗಿದ್ದವು. ಅಲ್ಲದೆ ಇದೇ ಸಂದರ್ಭದಲ್ಲಿ ಅನೇಕ ಗಣ್ಯರಿಗೆ ಸಂಬಂಧಿಸಿದ ದಾಖಲೆಗಳನ್ನು ಸಹ ಸೀಜ್ ಮಾಡಲಾಗಿತ್ತು. ಇದೀಗ ಎಲ್ಲ ಪಿನ್ ಟು ಪಿನ್ ದಾಖಲೆಗಳನ್ನು ಪೊಲೀಸರು ಚಾರ್ಜ್ ಶೀಟ್‍ನಲ್ಲಿ ಉಲ್ಲೇಖಿಸಿದ್ದಾರೆ.
Advertisement
Advertisement
ಪ್ರಮುಖ ದಾಖಲೆಗಳು
ಚಾರ್ಜ್ ಶೀಟ್ ನಲ್ಲಿ ಹೇಳಿರುವ ಕೆಲವು ಪ್ರಮುಖ ದಾಖಲೆಗಳ ಲಭ್ಯವಾಗಿದ್ದು, ಇದರಲ್ಲಿ ಸಚಿವ ಮುರಗೇಶ್ ನಿರಾಣಿ ಲೇಟರ್ ಹೆಡ್ ಮತ್ತು ಬಯೋಡೆಟಾ, ಪ್ರಮೋದ್ ಮಧ್ವರಾಜ್ ಲೇಟರ್ ಹೆಡ್, ಬಯೋಡೆಟಾ, ಉಮೇಶ್ ಕತ್ತಿಯವರ ಲೇಟರ್ ಹೆಡ್, ಬಯೋಡೆಟಾ ಹಾಗೂ ಸಚಿವ ಶ್ರೀರಾಮುಲು ಅವರಿಗೆ ಸೇರಿದ ಕೆಲ ದಾಖಲೆಗಳನ್ನು ಸಹ ಸೀಜ್ ಮಾಡಲಾಗಿದೆ. ಮುತ್ತಪ್ಪ ರೈಗೆ ಸೆಕ್ಯೂರಿಟಿ ಕೋರಿ ಶ್ರೀರಾಮುಲು ಹೆಸರಲ್ಲಿ ಪತ್ರ ಬರೆದಿರುವುದು ಸಹ ಸಿಕ್ಕಿದೆ. ಶ್ರೀರಾಮುಲು ಅವರ ಲೇಟರ್ ಹೆಡ್ ನಲ್ಲಿ ಗೃಹ ಇಲಾಖೆಗೆ ಪತ್ರ ಬರೆಯಲಾಗಿದೆ.
Advertisement
Advertisement
ಬಿಜೆಪಿ ಪಕ್ಷದ ಹೆಸರಿನ ಅನೇಕ ಲೇಟರ್ ಹೆಡ್ ಸಮೇತ ಪತ್ರಗಳು, ಉಪಚುನಾವಣೆಗೆ ವಸಂತ್ ಬೆಳವಾಯಿ ಟಿಕೆಟ್ ಕೋರಿಕೆ ಪತ್ರ. ಟಿ.ಶ್ಯಾಮ್ ಭಟ್ ವಯಕ್ತಿಕ ಸೇವಾ ವಿವರ ಇರುವ ದಾಖಲೆಗಳು, ನಿವೃತ್ತ ಜಡ್ಜ್ ಇಂದ್ರಕಲಾ ಅವರ ಪರ್ಸನಲ್ ಪ್ರೋಫೈಲ್ ಗಳು ಲಭ್ಯವಾಗಿವೆ. 9 ಮಂದಿ ಸಾಕ್ಷಿಗಳ ಸಮೇತ ಪೊಲೀಸರು ಚಾರ್ಜ್ ಶೀಟ್ ಸಲ್ಲಿಸಿದ್ದು, ಯುವರಾಜ್ ಸ್ವಾಮಿ ವಿರುದ್ಧ ಐಪಿಸಿ ಸೆಕ್ಷನ್ 420, 504, 506 ಅಡಿ ಚಾರ್ಜ್ ಸಲ್ಲಿಸಲಾಗಿದೆ. ಮಾಡಿದ ಕೃತ್ಯವನ್ನು ಯುವರಾಜ್ ಸ್ವಾಮಿ ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾನೆ.
ಕೇಸ್ ನಂಬರ್ 12/2021 ಜ್ಞಾನಭಾರತಿ ಪೊಲೀಸ್ ಠಾಣೆ:
ಎಇಇ ಹುದ್ದೆ ಕೊಡಿಸುವುದಾಗಿ ರಾಜಾಜಿನಗರ ನಿವಾಸಿ ಜಿ.ನರಸಿಂಹ ಮೂರ್ತಿಯವರಿಗೆ ಲಕ್ಷಾಂತರ ಹಣ ಪಡೆದು ವಂಚನೆ ಮಾಡಲಾಗಿದೆ. ವಾಪಸ್ ಹಣ ಕೇಳಿದಾಗ ಕೊಲೆ ಮಾಡಿಸುವುದಾಗಿ ಬೆದರಿಕೆ ಹಾಕಿದ್ದಾನೆ. ನೀನು ಕೊಟ್ಟ ಹಣದಿಂದಲೇ ನಿನ್ನ ಕೊಲೆಗೆ ಸುಪಾರಿ ಕೊಡುತ್ತೇನೆ. ನಿನ್ನ ಹಣದಿಂದಲೇ ರೌಡಿಗಳಿಂದ ನಿನ್ನನ್ನು ಕೊಲ್ಲಿಸುತ್ತೇನೆ ಎಂದು ಯುವರಾಜ್ ಸ್ವಾಮಿ ದೂರುದಾರರಿಗೆ ಜೀವ ಬೆದರಿಕೆ ಹಾಕಿದ್ದಾನೆ.
ಕೇಸ್ ನಲ್ಲಿ ಯುವರಾಜ್ ಮೇಲೆ ಬಂದಿದ್ದ ಆರೋಪ:
ರಾಜಾಜಿನಗರ ಡಾಕ್ಟರ್ ನರಸಿಂಹ ಸ್ವಾಮಿಯ ಪುತ್ರ ರವೀಂದ್ರ ಎಂ.ಟೆಕ್ ಮುಗಿಸಿದ್ದ. ಅವರಿಗೆ ಲೋಕೇಶ್ ಎಂಬಾತನ ಮೂಲಕ ಈ ಯುವರಾಜ್ ಪರಿಚಯವಾಗಿದ್ದನಂತೆ. ಆದರಂತೆ ಅಕ್ಟೋಬರ್ 20, 2019 ರಲ್ಲಿ ಭೇಟಿಯಾಗಿ, ನಾನು ಆರ್‍ಎಸ್‍ಎಸ್ ಮುಖಂಡ, ಬಿಜೆಪಿ ಮುಖಂಡರು ನನಗೆ ಪರಿಚಯ ಅದರಲ್ಲೂ ಕೇಂದ್ರದ ನಾಯಕರು ಪರಿಚಯ ಎಂದು ಹೇಳಿದ್ದನಂತೆ. ನಾನು ನನಗೆ ಗೊತ್ತಿರುವ ಮಂತ್ರಿಯ ಬಳಿ ಮಾತನಾಡಿ ಎಇಇ ಕೆಲಸ ಕೊಡಿಸುವುದಾಗಿ ಹೇಳಿದ್ದನಂತೆ. ಇದಕ್ಕಾಗಿ 75 ಲಕ್ಷ ರೂ. ಲಂಚ ಕೇಳಿದ್ದನಂತೆ. ಅದನ್ನು ಕ್ಯಾಶ್ ಮೂಲಕವೇ ಕೊಡಬೇಕು ಅಂದಿದ್ದ. ಇದಕ್ಕೆ ಒಪ್ಪಿ 30 ಲಕ್ಷ ರೂ.ಗಳನ್ನು ನೀಡಿದ್ದಾರೆ. ಖುದ್ದು ಯುವರಾಜ್ ಮನೆಗೆ ಹೋಗಿ ಆತನಿಗೆ ಹಣವನ್ನ ನೀಡಿದ್ದಾರೆ. ಆದರೆ ಈ ವರೆಗೆ ಆತ ಕೆಲಸ ಕೊಡಿಸಿಲ್ಲ. ಹಣವನ್ನೂ ವಾಪಸ್ ನೀಡಿಲ್ಲವಂತೆ. ಈ ಬಗ್ಗೆ ಕೇಳಲು ಹೋದಾಗ ಜೀವ ಬೆದರಿಕೆ ಹಾಕಿದ್ದಾನೆ. ನೀನು ಕೊಟ್ಟಿರುವ ಹಣವನ್ನು ರೌಡಿಗಳಿಗೆ ಕೊಟ್ಟು ಸುಪಾರಿ ನೀಡುತ್ತೇನೆ. ನೀನು ಕೊಟ್ಟ ಹಣದಿಂದಲೇ ನಿನ್ನನ್ನು ಕೊಲ್ಲಿಸುತ್ತೇನೆ ಎಂದು ಜೀವ ಬೆದರಿಕೆ ಹಾಕಿದ್ದಾನಂತೆ.
ಯುವರಾಜ್ ಸ್ವಾಮಿಯಿಂದ ತಪ್ಪೊಪ್ಪಿಗೆ:
2019ರ ಮಾರ್ಚ್ ನಲ್ಲಿ ಏರ್‍ಪೋರ್ಟ್ ನಲ್ಲಿ ಡ್ರೈವರ್ ಆಗಿ ಕೆಲಸ ಮಾಡುವ ಲೋಕೇಶ್ ಕಾರನ್ನು ಬುಕ್ ಮಾಡಿಕೊಂಡಿದ್ದೆ. ಈ ವೇಳೆ ಆತನ ಜೊತೆ ಪರಿಚಯವಾಗಿ ನಂತರ ಆತನ ಮೂಲಕ ಪಿಕ್ ಅಪ್ ಡ್ರಾಪ್ ಮಾಡಿಸಿಕೊಳ್ಳುತ್ತಿದೆ. 2019 ರಲ್ಲಿ ಆತನ ಮೂಲಕ ನರಸಿಂಹಸ್ವಾಮಿ ಅವರು ತಮ್ಮ ಮಗನಿಗೆ ಎಇಇ ಕೆಲಸ ಕೊಡಿಸಿ ಎಂದು ಬಂದಿದ್ದು ನಿಜ. ಈ ಬಗ್ಗೆ ನನ್ನ ಮನೆಯ ನೆಲಮಡಿಯಲ್ಲಿ ಕುಳಿತು ಮಾತನಾಡಿ, 75 ಲಕ್ಷ ಹಣವನ್ನು ಕ್ಯಾಶ್ ಕೇಳಿದ್ದೆ. ಅದಕ್ಕೆ ಒಪ್ಪಿದ ಅವರು, 30 ಲಕ್ಷ ಹಣವನ್ನು ಕ್ಯಾಶ್‍ನಲ್ಲಿ ಕೊಟ್ಟಿದ್ದರು. ಅದನ್ನು ನನ್ನ ಮತ್ತು ಕುಟುಂಬದ ಖರ್ಚಿಗಾಗಿ ಬಳಸಿಕೊಂಡಿದ್ದೇನೆ. ಅವರಿಗೆ ಇಲ್ಲಿತನಕ ಯಾವುದೇ ಕಲಸವನ್ನು ಸಹ ಕೊಡಿಸಿಲ್ಲ. ಕೇಳಲು ಬಂದಾಗಿ ಜೀವ ಬೆದರಿಕೆ ಹಾಕಿದ್ದು ನಿಜ. ಜಾಮೀನು ಪಡೆದು ಹೊರ ಬಂದ ತಕ್ಷಣ ಹಣ ವಾಪಸ್ ನೀಡುತ್ತೇನೆ ಎಂದಿದ್ದಾನೆ.
ಕೇಸ್ ನಂಬರ್ 38/2020 ಅನ್ನಪೂರ್ಣೇಶ್ವರಿನಗರ ಪೊಲೀಸ್ ಠಾಣೆ:
ತನ್ನ ಬಳಿ ಕೆಲಸ ಮಾಡುತ್ತಿದ್ದ ಡ್ರೈವರ್ ಗೂ ಯುವರಾಜ್ ವಂಚಿಸಿದ್ದು, ಅಮಾಯಕ ಕೆಲಸಗಾರನ ಬ್ಯಾಂಕ್ ಅಕೌಂಟ್ ನ್ನು ದುರ್ಬಳಕೆ ಮಾಡಿಕೊಂಡು, ತಾನು ವಂಚಿಸಿ ಪಡೆದ ಹಣವನ್ನು ಡೆಪಾಸಿಟ್ ಮಾಡುತ್ತಿದ್ದ. ಐಟಿ ಇಲಾಖೆಯಿಂದ ಬಂದ ನೊಟೀಸ್ ನೋಡಿ ಡ್ರೈವರ್ ಗಾಬರಿಯಾಗಿದ್ದ. ಈ ಕುರಿತು ಯುವರಾಜ್ ನ ಪ್ರಶ್ನೆ ಮಾಡಿದಾಗ ಹೊಡೆದು ಮನೆಯಿಂದ ಆಚೆ ಹಾಕಿದ್ದ.
ಕೇಸ್ ನಂಬರ್ 40/2020 ಸೆನ್ ಪೊಲೀಸ್ ಠಾಣೆ:
ಕೆಎಸ್‍ಆರ್‍ಟಿಸಿ ಅಧ್ಯಕ್ಷ ಹುದ್ದೆ ಕೊಡಿಸುವುದಾಗಿ ಹೇಳಿ ರೈತ ಹಾಗೂ ಉದ್ಯಮಿ ಸುಧೀಂದ್ರ ರೆಡ್ಡಿಗೆ 1 ಕೋಟಿ ರೂಪಾಯಿ ಉಂಡೆನಾಮ ಹಾಕಿದ್ದಾನೆ. ಬರೋಬ್ಬರಿ 1 ಕೋಟಿ ರೂ.ಗಳನ್ನು ಪಡೆದು ಸ್ವಾಮಿ ವಂಚಿಸಿದ್ದಾನೆ. ಚೆಕ್ ಮೂಲಕ ಯುವರಾಜ್ ಸ್ವಾಮಿ ಹಣ ಪಡೆದಿದ್ದು, ಬಿಜೆಪಿ ಕಾರ್ಯಕರ್ತ ಮಧುರಾಜ್ ಜೊತೆ ಬಂದು ವಂಚನೆ ಮಾಡಿದ್ದಾನೆ. 10 ದಿನಗಳಲ್ಲಿ ಹುದ್ದೆ ಕೊಡಿಸುವುದಾಗಿ ಹೇಳಿ ಹಣ ಪಡೆದು ಮೋಸ ಮಾಡಿದ್ದಾರೆ. ಈ ಕುರಿತು ಯುವರಾಜ್ ಮತ್ತು ಮಧುರಾಜ್ ವಿರುದ್ಧ ಸೆನ್ ಠಾಣೆ ಪೊಲೀಸರು ಕೇಸ್ ದಾಖಲಿಸಿದ್ದಾರೆ.
ಮೇ 2020ರಲ್ಲಿ ಬಿಜೆಪಿ ಕಾರ್ಯಕರ್ತ ಮಧುರಾಜ್ ಜೊತೆಯಲ್ಲಿ ಯುವರಾಜ್ ನ ಕರೆದುಕೊಂಡು ಸುಧೀಂದ್ರ ರೆಡ್ಡಿ ಮನೆಗೆ ಹೋಗಿದ್ದನಂತೆ. ನಿಮಗೆ ಕೆಎಸ್‍ಆರ್‍ಟಿ ಅಧ್ಯಕ್ಷ ಹುದ್ದೆ ಕೊಡಿಸುತ್ತೇನೆ ಎಂದು ನಂಬಿಸಿದ್ದರಂತೆ. ಅದಕ್ಕಾಗಿ 1 ಕೋಟಿ ಹಣವನ್ನು ಪಡೆದು, ಹುದ್ದೆ ಕೊಡಿಸದೇ ವಂಚನೆ ಮಾಡಿದ್ದಾನಂತೆ. ಬಳಿಕ ಮೊದಲು ಪೋನ್ ರಿಸಿವ್ ಮಾಡದೇ ತಪ್ಪಿಸಿಕೊಳ್ಳುತ್ತಿದ್ದನಂತೆ. ನಂತರ ನಿನಗೆ ಹಣ ವಾಪಸ್ ಕೊಡಲ್ಲ. ಹಣ ಕೇಳಿದರೆ ನಿನಗೊಂದು ಗತಿ ಕಾಣಿಸುತ್ತೆನೆಂದು ಬೆದರಿಕೆ. ಈ ಬಗ್ಗೆ ಯಾರ ಬಳಿಯಾದರೂ ಚರ್ಚೆ ಮಾಡಿದರೆ ಹುಷಾರ್ ಎಂದು ಬೆದರಿಕೆ ಹಾಕಿದ್ದ ಎಂದು ಆರೋಪಿಸಲಾಗಿದೆ.
ನನಗೆ ಗೋವಿಂದರಾಜನಗರದ ಬಿಜೆಪಿ ಕಾರ್ಯಕರ್ತ ಮಧುರಾಜ್ ಮೂಲಕ ಸುಧೀಂದ್ರ ರೆಡ್ಡಿ 2020ರ ಮೇ ತಿಂಗಳಲ್ಲಿ ಪರಿಚಯವಾದರು. ಅವರಿಗೆ ಕೆಎಸ್‍ಆರ್‍ಟಿಸಿ ಅಧ್ಯಕ್ಷ ಹುದ್ದೆ ಕೊಡಿಸುವುದಾಗಿ ನಾನು ಹೇಳಿದ್ದು ನಿಜ. ಅದಕ್ಕೆ ಅವರ ಬ್ಯಾಂಕ್ ಖಾತೆಯಿಂದ ಹಾಗೂ ಕ್ಯಾಷ್ ಮೂಲಕ 1 ಕೋಟಿ ರೂಪಾಯಿ ಪಡೆದುಕೊಂಡಿದ್ದೇನೆ. ಆದರೆ ಅವರಿಗೆ ನಾನು ಕೆಲಸವನ್ನು ಕೊಡಿಸಿಲ್ಲ. ಅವರಿಂದ ಪಡೆದ ಹಣವನ್ನು ನನ್ನ ಮನೆಯಲ್ಲಿ ಇಟ್ಟಾಗ 26 ಲಕ್ಷ ರೂ.ಗಳನ್ನು ಪೊಲೀಸರು ಸೀಜ್ ಮಾಡಿದ್ದಾರೆ. ಉಳಿದ ಹಣವನ್ನು ಕಾಡುಕೊತ್ತನಹಳ್ಳಿ ಗ್ರಾಮದ ತೋಟದ ಮನೆಯ ಬೆಡ್ ರೂಂ ನ ಬೀರುವಿನಲ್ಲಿ ಇಟ್ಟಿದ್ದೇನೆ. ನೀವು ಕರೆದುಕೊಂಡು ಹೋದರೆ ಅದನ್ನು ನೀಡುತ್ತೇನೆ. ಮತ್ತಷ್ಟು ಹಣವನ್ನು ಕಾರುಗಳ ಖರೀದಿಗೆ ಬಳಸಿಕೊಂಡಿದ್ದೇನೆ ಎಂದು ಯುವರಾಜ್ ಹೇಳಿದ್ದಾನೆ.