ಬಳ್ಳಾರಿ: ಯುವತಿ ಜೊತೆ ಸ್ನೆಹ ಮಾಡಿದ್ದಕ್ಕೆ ಯುವಕ, ಯುವಕನ ತಂದೆ ಹಾಗೂ ಚಿಕ್ಕಪ್ಪನ ಮೇಲೆ ಮಾರಣಾಂತಿಕ ಹಲ್ಲೆ ನಡೆದ ಘಟನೆಯೊಂದು ಬಳ್ಳಾರಿಯ ಕೌಲ್ ಬಜಾರ್ ಪ್ರದೇಶದಲ್ಲಿ ನಡೆದಿದೆ.
ಈ ಘಟನೆ ಡಿಸೆಂಬರ್ 7 ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಸದ್ಯ ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. ಕೌಲ್ ಬಜಾರ್ ಏರಿಯಾದ ಯುವಕ ಪೈಜುಲ್ ಹಾಗೂ ಯುವತಿ ಅಬಿದಾ ಗಾಢ ಸ್ನೇಹಿತರಾಗಿದ್ದರು. ಈ ವಿಚಾರ ಗೊತ್ತಾಗಿ ಈ ಹಿಂದೆ ಅಬಿದಾ ಮನೆಯವರು ಇಬ್ಬರಿಗೂ ಮಾತನಾಡದಂತೆ ವಾರ್ನಿಂಗ್ ಕೊಟ್ಟಿದ್ದರು. ಆದರೂ ಸ್ನೇಹ ಮುದುವರಿಸಿದ್ದಕ್ಕೆ ಅಬಿದಾ ಮನೆಯವರು ನಡುರಸ್ತೆಯಲ್ಲೇ ಯುವಕ ಹಾಗೂ ಕುಟುಬಸ್ಥರ ಮೇಲೆ ಹಲ್ಲೆ ಮಾಡಿದ್ದಾರೆ.
ಚೇರ್ ಹಾಗೂ ಕಲ್ಲಿನಿಂದ ಮಾರಣಾಂತಿಕ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ. ಅಬಿದಾ ತಂದೆ ಆರಿಫ್, ಚಿಕ್ಕಪ್ಪ ಇದಾಯತ್ ಸೇರಿ ಎಂಟು ಜನರಿಂದ ಹಲ್ಲೆ ನಡೆದಿದೆ. ಘಟನೆಯಲ್ಲಿ ಫೈಜುಲ್ ತಂದೆ ವಲಿಭಾಷಾ ಹಾಗೂ ಚಿಕ್ಕಪ್ಪ ನಿಸಾರ್ ಅಹಮದ್ ಗೆ ಗಂಭೀರ ಗಾಯಗಳಾಗಿದ್ದು, ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ.
ಘಟನೆ ಸಂಬಂಧ ಕೌಲ್ ಬಜಾರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಎಂಟು ಜನರ ವಿರುದ್ಧ ಎಫ್‍ಐಆರ್ ಹಾಕಲಾಗಿದೆ. ಆದರೆ ಘಟನೆ ನಡೆದು ಐದು ದಿನವಾದ್ರೂ ಇದುವೆರಗು ಯಾರನ್ನೂ ಬಂಧಿಸಿಲ್ಲ.