ಮಂಗಳೂರು: ದಕ್ಷಿಣ ಜಿಲ್ಲೆಯ ಬಂಟ್ವಾಳದ ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಯುವಕನನ್ನು ಸ್ಥಳೀಯ ಯುವಕರ ತಂಡ ಜೀವದ ಹಂಗು ತೊರೆದು ನದಿಗೆ ಜಿಗಿದು ಬದುಕಿಸಲು ಪ್ರಯತ್ನ ಪಟ್ಟ ಘಟನೆ ಮೆಚ್ಚುಗೆಗೆ ಪಾತ್ರವಾಗಿತ್ತು. ಇಂತಹ ಮಾನವೀಯತೆ ಮೆರೆದ ತಂಡಕ್ಕೆ ಕರ್ನಾಟಕ ಕಲ್ಚರಲ್ ಫೌಂಡೇಷನ್ ಒಮಾನ್ ರಾಷ್ಟ್ರೀಯ ಸಮಿತಿಯು ಅಭಿನಂದನೆ ಸಲ್ಲಿಸಿದೆ.
ಮೇ 24 ರಂದು ಬಂಟ್ವಾಳದ ಪಾಣೆಮಂಗಳೂರಿನಲ್ಲಿ ನೇತ್ರಾವತಿ ನದಿಗೆ ಹಾರಿ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದು, ಈ ಸಂಧರ್ಭ ಗೂಡಿನಬಳಿಯ ನಿವಾಸಿಗಳಾದ ಮುಹಮ್ಮದ್, ಸಮೀರ್, ಝಾಯಿದ್, ಆರಿಫ್, ಮುಕ್ತಾರ್ ತೌಸೀಫ್ ರವರು ಜಾತಿ ಧರ್ಮವನ್ನು ಲೆಕ್ಕಿಸದೆ ಕೂಡಲೇ ತಮ್ಮ ಜೀವ ಪಣಕ್ಕಿಟ್ಟು ನದಿಗೆ ಜಿಗಿದಿದ್ದರು. ಯುವಕನನ್ನು ನದಿಯಿಂದ ದಡಕ್ಕೆ ಎಳೆತಂದು ಪ್ರಥಮ ಚಿಕಿತ್ಸಾ ವಿಧಾನಗಳನ್ನು ನೀಡುವುದರ ಮೂಲಕ ರಕ್ಷಿಸಲು ಪ್ರಯತ್ನಿಸಿದ್ದರು.
Advertisement
Advertisement
ಆದರೆ ದುರಾದೃಷ್ಟವಶಾತ್ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದ. ನಂತರ ಯುವಕರು ನದಿಗೆ ಜಿಗಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಬಾರೀ ವೈರಲ್ ಆಗಿ ಮೆಚ್ಚುಗೆ ಗಳಿಸಿತ್ತು. ಈದುಲ್ ಫಿತ್ರ್ ಹಬ್ಬ ಆಚರಿಸುವ ದಿನದಂದು ನಡೆದ ಘಟನೆಯು ಇಸ್ಲಾಮ್ ಜಗತ್ತಿಗೆ ಶಾಂತಿ, ಸೌಹಾರ್ದತೆ, ತ್ಯಾಗವನ್ನು ನೆನಪಿಸುವ ಮಾನವೀಯತೆಯ ಸಂದೇಶವನ್ನು ನೀಡಿದ್ದಾರೆ. ಇಡೀ ನಾಡು ಹೆಮ್ಮೆಪಡುವಂತಹ ಇವರ ಸೇವೆಯು ಶ್ಲಾಘನೀಯ ಎಂದು ಕೆಸಿಎಫ್ ಒಮಾನ್ ಪ್ರತಿನಿಧಿಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.