ಯುನೆಸ್ಕೋ ವಿಶ್ವ ಪರಂಪರೆ ಸೇರ್ಪಡೆಯ ತಾತ್ಕಾಲಿಕ ಪಟ್ಟಿಯಲ್ಲಿ ಹಿರೇಬೆಣಕಲ್

Public TV
3 Min Read
kpl hirebenkal

ಕೊಪ್ಪಳ: ಜಿಲ್ಲೆಯ ಗಂಗಾವತಿ ತಾಲೂಕಿನ ಹಿರೇಬೆಣಕಲ್ ಗ್ರಾಮದ ಶಿಲಾಯುಗದ ಸ್ಥಳ ವಿಶ್ವಪಾರಂಪರಿಕ ತಾತ್ಕಾಲಿಕ ಪಟ್ಟಿಗೆ ಆಯ್ಕೆಯಾಗಿದೆ.

ಕೇಂದ್ರ ಪುರಾತತ್ವ ಇಲಾಖೆಯು ವಿಶ್ವಪಾರಂಪರಿಕ ಪಟ್ಟಿಗೆ ದೇಶದ 9 ಸ್ಥಳಗಳ ಪ್ರಸ್ತಾವನೆ ಸಲ್ಲಿಸಿತ್ತು. ಯುನೆಸ್ಕೋ 9 ಸ್ಥಳಗಳ ಪೈಕಿ 6 ಸ್ಥಳಗಳನ್ನು ತಾತ್ಕಾಲಿಕ ಪಟ್ಟಿಗೆ ಆಯ್ಕೆ ಮಾಡಿದ್ದು, ಅದರಲ್ಲಿ ಕೊಪ್ಪಳದ ಹಿರೇಬೆಣಕಲ್ ಗ್ರಾಮದ ಶಿಲಾಯುಗದ ಸ್ಥಳ ಸೇರಿದೆ. ಈ ಕುರಿತು ಕೇಂದ್ರ ಸಚಿವ ಪ್ರಹ್ಲಾದ್ ಸಿಂಗ್ ಪಟೇಲ್ ಅವರು ಟ್ವೀಟ್ ಮಾಡಿದ್ದಾರೆ.

kpl hirebenkal 2 3

ಗಂಗಾವತಿ ತಾಲೂಕಿನ ಹಿರೇಬೆಣಕಲ್ ಗ್ರಾಮ ಗಂಗಾವತಿಯಿಂದ ಸುಮಾರು 10 ಕಿ.ಮೀ. ದೂರದಲ್ಲಿದೆ. ಕೊಪ್ಪಳ-ಗಂಗಾವತಿಯ ರಾಜ್ಯ ಹೆದ್ದಾರಿ ಮಾರ್ಗ ಮಧ್ಯೆ ಇದೆ. ಹಿರೇಬೆಣಕಲ್ ಗ್ರಾಮ ದಕ್ಷಿಣ ಭಾರತದ ಬೃಹತ್ ಶಿಲಾಯುಗ ಕಾಲದ ಮಹತ್ವದ ನೆಲೆಯಾಗಿದೆ. ಕಬ್ಬಿಣ ಯುಗದ ಜನರ ಸುಮಾರು 500ಕ್ಕೂ ಅಧಿಕ ಶಿಲಾ ಸಮಾಧಿಗಳಿವೆ. ದೇಶದಲ್ಲಿ ಒಂದೇ ಕಡೆ ಇಷ್ಟೊಂದು ಶಿಲಾ ಸಮಾಧಿಗಳು ಮತ್ತೊಂದು ನೆಲೆಯಲ್ಲಿ ಕಂಡು ಬಂದಿಲ್ಲ.

ಹಿರೇಬೆಣಕಲ್ಲಿನಲ್ಲಿ ಮೃತರಾದವರ ಅಂತ್ಯಕ್ರಿಯೆಗೆ ಬೆಟ್ಟಗಳಲ್ಲಿ ದೊರೆಯುವ ಕಲ್ಲು ಬಂಡೆಗಳನ್ನು ಉಪಯೋಗಿಸಿ ಸಮಾಧಿ ನಿರ್ಮಾಣ ಮಾಡುತ್ತಿದ್ದರು. ಸಮಾಧಿಯಲ್ಲಿ ಮೃತರು ಬಳಸುತ್ತಿದ್ದ ವಸ್ತುಗಳನ್ನು ಇಡಲಾಗುತ್ತಿತ್ತು. ಸುಮಾರು 400 ಶಿಲಾ ಸಮಾಧಿಗಳು ಇನ್ನೂ ಇವೆ. 8 ರೀತಿಯ ಶಿಲಾ ಸಮಾಧಿ ಕಂಡುಬರುತ್ತಿವೆ. ಶಿಲಾ ಸಮಾಧಿಗಳ ಸುತ್ತಲೂ 30 ಗವಿಕಲ್ಲಾಶ್ರಯಗಳಲ್ಲಿ ಆ ಕಾಲದ ವರ್ಣಚಿತ್ರಗಳಿವೆ. ಆದ್ದರಿಂದ ಈ ನೆಲೆ ಭಾರತದ ಆದಿಮಾನವನ ಜೀವನ ಸಂಸ್ಕೃತಿ ತಿಳಿಯಲು ಅತ್ಯಂತ ಮಹತ್ವದ ನೆಲೆಯಾಗಿದೆ. ಸಂರಕ್ಷಣೆಯ ಅಗತ್ಯವಿದ್ದು, ವಿಶ್ವಪರಂಪರೆಯ ತಾಣವಾದರೆ ಮಾತ್ರ ಸಂರಕ್ಷಣೆ ಸಾಧ್ಯವಾಗಲಿದೆ. ಶಿಲಾಯುಗ ಸಂಸ್ಕೃತಿಯ ಅಧ್ಯಯನಕ್ಕೆ ಪ್ರಯೋಗ ಶಾಲೆಯಾಗಿದೆ.

kpl hirebenkal 2 1 e1621609585155

ಮಧ್ಯ ಪ್ರದೇಶದ ಭೀಮ್‍ಬೇಟ್‍ಕಾ ಬೆಟ್ಟ ಪ್ರದೇಶದಲ್ಲಿ 250 ಗವಿಚಿತ್ರಗಳಿದ್ದು, ವಿಶ್ವಪರಂಪರೆಯ ಪಟ್ಟಿಗೆ ಸೇರಿಸಿದೆ. ಆದರೆ ಕೊಪ್ಪಳದ ಗಂಗಾವತಿಯ 7 ಬೆಟ್ಟಗಳ ಸಾಲಿನಲ್ಲಿ 300ಕ್ಕೂ ಅಧಿಕ ಗವಿಚಿತ್ರಗಳು ಸೇರಿವೆ. ಆದ್ದರಿಂದ ವಿಶ್ವಪಾರಂಪರಿಕ ತಾಣ ಪಟ್ಟಿಗೆ ಸೇರಿಸುವುದು ಅತ್ಯಂತ ಅವಶ್ಯವಾಗಿದೆ ಎಂದು ಸಂಶೋಧಕ ಡಾ.ಶರಣಬಸಪ್ಪ ಕೋಲ್ಕಾರ್ ಹೇಳಿದ್ದಾರೆ.

ಹಿರೇಬೆಣಕಲ್ ಗ್ರಾಮದ ಬಳಿ ವ್ಯಾಪಿಸಿರುವ ಬೆಟ್ಟಗಳಲ್ಲಿ ಕಬ್ಬಿಣಯುಗದ ಬೃಹತ್ ಶಿಲಾ ಸಂಸ್ಕೃತಿ ಕಾಲದ ನೂರಾರು ಶಿಲಾಕೋಣೆಗಳು, ಸಮಾಧಿಗಳು, ಬೃಹತ್ ಆಕಾರದ ಶಿಲಾಗೊಂಬೆ, ಗವಿಗಳಲ್ಲಿ ವರ್ಣಚಿತ್ರಗಳು, ಬಂಡೆಯಲ್ಲಿ ಕೊರೆದ ಚಿತ್ರಗಳಿವೆ. ಹಿರೇಬೆಣಕಲ್ಲಿನ ಗವಿವರ್ಣ ಚಿತ್ರಗಳನ್ನು ಮೊದಲಿಗೆ ಆಂಗ್ಲ ಭೂ ಗರ್ಭ ಶಾಸ್ತ್ರಜ್ಞ ಲಿಯೋನಾರ್ಡ್‍ಮನ್ ಅವರು 1925 ರಲ್ಲಿ ಬೆಳಕಿಗೆ ತಂದರು. 1985ರಲ್ಲಿ ಪುರಾತತ್ವಜ್ಞ ಡಾ.ಅ.ಸುಂದರ್ ಅವರು ಶಿಲಾಸಮಾಧಿಗಳ ಅಧ್ಯಯನದ ಜೊತೆಗೆ 9 ಗವಿಗಳನ್ನು ಶೋಧಿಸಿದರು. ಇಲ್ಲಿನ ಚಿತ್ರಗಳು ಕ್ರಿ.ಪೂ.1000-500ರಲ್ಲಿ ಕೆತ್ತಿರಬಹುದೆಂಬ ಅಂದಾಜಿದೆ.

kpl hirebenkal 2 2

ಹಿರೇಬೆಣಕಲ್ಲಿನ ಗವಿಚಿತ್ರಗಳಲ್ಲಿ ಪ್ರಾಣಿಗಳಾದ ಜಿಂಕೆ, ಹಸು, ಗೂಳಿ, ನಾಯಿ, ಹುಲಿ, ಕುದುರೆ, ಮೀನು, ನವಿಲು ಸೇರಿದಂತೆ ಇತರೆ ಚಿತ್ರಗಳಿವೆ. ಅಲ್ಲದೆ ಮನುಷ್ಯರ ನರ್ತನದ ಚಿತ್ರಗಳಿದ್ದು, ಪಶುಪಾಲನೆ, ಬೇಟೆಗಾರಿಕೆಯ ಗವಿಚಿತ್ರಗಳಿವೆ. ಅದ್ಭುತವಾದ ಚಿತ್ರ ಕಲೆ ಹೊಂದಿರುವ ಹಿರೇಬೆಣಕಲ್ಲಿನ ಶಿಲಾಯುಗದ ಸ್ಥಳ ವಿಶ್ವ ಪಾರಂಪರಿಕ ತಾಣವಾಗಿಸಲು ತಾತ್ಕಾಲಿಕ ಆಯ್ಕೆಪಟ್ಟಿಯಲ್ಲಿ ಸೇರ್ಪಡೆಯಾಗಿರುವುದು ಈ ಭಾಗದ ಜನರಲ್ಲಿ ಸಂತಸ ಮೂಡಿಸಿದೆ.

Share This Article
Leave a Comment

Leave a Reply

Your email address will not be published. Required fields are marked *