ವಿಜಯಪುರ: ಮಂತ್ರಿ ಸ್ಥಾನ ಕೊಡುವ ಜಾಗದಲ್ಲಿ ನಮ್ಮವರೇ ಒಬ್ಬರು ಬರುತ್ತಾರೆ. ಉತ್ತರ ಕರ್ನಾಟಕದವರೇ ಬರುತ್ತಾರೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.
ನಗರದಲ್ಲಿ ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಮೂರು ತಿಂಗಳು ಎಂದು ಹೇಳಿದ್ದೆ. ಅದು ಬೇರೆಯದ್ದಕ್ಕೆ, ಇದೀಗ ಯುಗಾದಿಗೆ ಬದಲಾವಣೆ ಯಾಗುತ್ತೆ. ಹೊಸ ವರ್ಷಕ್ಕೆ ಹೊಸ ಮುಖ್ಯಮಂತ್ರಿ ಆಗುತ್ತಾರೆ ಎಂದರು.
ಶಿವಮೊಗ್ಗದ ಸ್ಫೊಟದ ಪ್ರಕರಣವನ್ನ ಸಿಬಿಐಗೆ ನೀಡಬೇಕು. ಎಲ್ಲ ರಾಜಕೀಯ ವ್ಯಕ್ತಿಗಳದ್ದೂ ಗಣಿಗಾರಿಕೆ ಇದೆ. ದುರ್ದೈವ ಎಂದರೆ ಗಣಿಗಾರಿಕೆಯಲ್ಲೇ ರಾಜಕಾರಣಿಗಳಿದ್ದಾರೆ. ಹೀಗಾಗಿ ಯಾವ ತನಿಖೆಯೂ ಸಫಲ ಆಗುವುದಿಲ್ಲ. ನೀವು ಕೂಡ ಎರಡು ದಿನ ತೊರಿಸುತ್ತೀರಿ, ನಂತರ ಬೇರೆ ಸುದ್ದಿಗೆ ಹೋಗ್ತೀರಿ. ಶಿವಮೊಗ್ಗ ಘಟನೆ ಭಾರೀ ಭಯಾನಕ ಘಟನೆ. ಒಂದು ವೇಳೆ ಶಿವಮೊಗ್ಗ ನಗರದಲ್ಲೆ ಬ್ಲಾಸ್ಟ್ ಆಗಿದ್ದರೆ ಏನು ಮಾಡುತ್ತಿದ್ದಿರಿ ಎಂದು ಪ್ರಶ್ನಿಸಿದ್ದಾರೆ. ಇದು ಎಲ್ಲಿಂದ ಬರ್ತಿದೆ, ಇದರಲ್ಲಿ ಯಾವ ರಾಜಕಾರಣಿಗಳು ಶಾಮೀಲಾಗಿದ್ದಾರೆ ಎಂಬುದರ ಬಗ್ಗೆ ಮುಕ್ತವಾಗಿ ತನಿಖೆ ಆಗಬೇಕೆಂದು ಆಗ್ರಹಿಸಿದರು.
ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆಗೆ ಮಾಡಲು ಬೇರೆ ಕೆಲಸ ಇಲ್ಲ. ತನ್ನ ಸರ್ಕಾರದ ವೈಫಲ್ಯವನ್ನ ಮುಚ್ಚಲು ಈ ರೀತಿ ಕುತಂತ್ರ ಮಾಡುತ್ತಿದ್ದಾರೆ. ಛತ್ತ ಸೇರಿದಂತೆ ಅನೇಕ ಮಹಾರಾಷ್ಟ್ರದ ಹಳ್ಳಿಗಳು ಬೆಳಗಾವಿಗೆ ಸೇರಬೇಕು. ಉಪದ್ಯಾಪಿ ಠಾಕ್ರೆ ಹತಾಶರಾಗಿ ಈ ಕೆಲಸ ಮಾಡುತ್ತಿದ್ದಾರೆ ಎಂದು ಠಾಕ್ರೆ ವಿರುದ್ಧ ವಾಗ್ದಾಳಿ ನಡೆಸಿದರು.
ಎಚ್‍ಡಿಕೆ, ನಾವು ಹಳೆಯ ಮಿತ್ರರು. ನಿನ್ನೆ ಯಾವುದೇ ರಾಜಕೀಯ ಮಾತುಕತೆ ಆಗಿಲ್ಲ. ನೀವು ಒಳ್ಳೆಯ ನಾಯಕರು, ನಿಮ್ಮನ್ನು ಬಿಟ್ಟು ಕೊಟ್ಟು ನಾವು ತಪ್ಪು ಮಾಡಿದೆವು. ಕರ್ನಾಟಕದಲ್ಲಿ ನಿಜವಾದ ವಿರೋಧ ಪಕ್ಷದ ನಾಯಕ ನೀವೇ ಎಂದರು. ನಾನು ಬಿಜೆಪಿ ಬಿಟ್ಟು ಎಲ್ಲೂ ಹೋಗಲ್ಲ. ನನ್ನ ಯಾರೂ ಹೊರಗೆ ಹಾಕಲು ಆಗಲ್ಲ ಎಂದರು.
ಮೊಬೈಲ್ ಇಡಲು ವಿಧಾನಸಭೆ ಹೊರಗಡೆ ಬಾಕ್ಸ್ ಮಾಡಿದ್ದಾರೆ. ನಾವೆಲ್ಲ ಅಲ್ಲೆ ಇಟ್ಟು ಹೋಗುತ್ತೇವೆ. ನಿನ್ನೆಯ ಪ್ರಕಾಶ ರಾಠೋಡ ಪ್ರಕರಣದ ಬಗ್ಗೆ ಸೂಕ್ತ ತನಿಖೆ ಮಾಡಿ ಕ್ರಮ ಕೈಗೊಳ್ಳಬೇಕು. ಇದನ್ನ ಗಂಭೀರವಾಗಿ ತಗೆದುಕೊಳ್ಳ ಬೇಕು ಎಂದು ಆಗ್ರಹಿಸಿದರು.