– ಮ್ಯಾಜಿಸ್ಟ್ರೇಟ್ ಅನುಮತಿ ಸಹ ಬೇಕಿಲ್ಲ
ಲಕ್ನೋ: ಉತ್ತರ ಪ್ರದೇಶದಲ್ಲಿ ಅಪರಾಧ ಪ್ರಕರಣಗಳು ಹೆಚ್ಚು ನಡೆಯುವುದು ತಿಳಿದೇ ಇದೆ. ಹೀಗಾಗಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸರ್ಕಾರ ಕಾನೂನು ಸುವ್ಯವಸ್ಥೆಗೆ ಮೇಜರ್ ಸರ್ಜರಿ ಮಾಡಿದ್ದು, ವಿಶೇಷ ಪೊಲೀಸ್ ಪಡೆಯನ್ನು ನಿರ್ಮಿಸುತ್ತಿದೆ. ಈ ಪಡೆಗೆ ಸಂಪೂರ್ಣ ಸ್ವಾತಂತ್ರ್ಯವನ್ನು ನೀಡಲಾಗಿದ್ದು, ಯಾವುದೇ ವಾರೆಂಟ್ ಇಲ್ಲದೆ ಯಾರ ಮನೆಗೆ ಬೇಕಾದರೂ ದಾಳಿ ನಡೆಸಿ ಸರ್ಚ್ ಮಾಡಬಹುದು ಹಾಗೂ ಆರೋಪಿಗಳನ್ನು ಮುಲಾಜಿಲ್ಲದೆ ಬಂಧಿಸಬಹುದಾಗಿದೆ.
Advertisement
ಈ ಕುರಿತು ಉತ್ತರ ಪ್ರದೇಶ ಸರ್ಕಾರ ಭಾನುವಾರ ಸ್ಪಷ್ಟಪಡಿಸಿದ್ದು, ಉತ್ತರ ಪ್ರದೇಶದಲ್ಲಿ ವಿಶೇಷ ಪೊಲೀಸ್ ಪಡೆಯನ್ನು ಯೋಜಿಸಲಾಗುತ್ತಿದೆ. ಇದು ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯೂರಿಟಿ ಫೋರ್ಸ್(ಸಿಐಎಸ್‍ಎಫ್)ನ ಅಧಿಕಾರವನ್ನು ಹೋಲುತ್ತದೆ. ಈ ಪೊಲೀಸ್ ಪಡೆ ಯಾರ ಅನುಮಾನಾಸ್ಪದವಾಗಿ ಕಂಡು ಬಂದ ಯಾವುದೇ ಮನೆ ಮೇಲೆ ಯಾವುದೇ ವಾರೆಂಟ್ ಇಲ್ಲದೆ ದಾಳಿ ಮಾಡಬಹುದು. ಅಲ್ಲದೆ ವಾರೆಂಟ್ ಇಲ್ಲದೆ ಬಂಧಿಸಬಹುದು ಎಂದು ತಿಳಿಸಿದೆ.
Advertisement
Advertisement
ಈ ತಂಡಕ್ಕೆ ಉತ್ತರ ಪ್ರದೇಶ ವಿಶೇಷ ಭದ್ರತಾ ಪಡೆ(ಯುಪಿಎಸ್‍ಎಸ್‍ಎಫ್) ಎಂದು ಹೆಸರಿಡಲಾಗಿದ್ದು, ನ್ಯಾಯಾಲಯಗಳು, ವಿಮಾನ ನಿಲ್ದಾಣಗಳು, ಆಡಳಿತ ಕಟ್ಟಡ, ಮಹಾನಗರ, ಬ್ಯಾಂಕ್ ಇತರೆ ಸರ್ಕಾರಿ ಕಚೇರಿಗಳನ್ನು ರಕ್ಷಿಸುವ ಹೊಣೆಯನ್ನು ಈ ಪಡೆಗೆ ನೀಡಲಾಗಿದೆ.
Advertisement
ಉತ್ತರ ಪ್ರದೇಶದ ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವನೀಶ್ ಅವಸ್ಥಿ ಟ್ವೀಟ್ ಮಾಡಿದ್ದು, ಇದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಕನಸಿನ ಯೋಜನೆಯಾಗಿದೆ. ಆರಂಭಿಕ ಹಂತವಾಗಿ ಎಂಟು ಬೆಟಾಲಿಯನ್‍ಗಳನ್ನು ನಿಯೋಜಿಸಲಾಗಿದ್ದು, ಇದಕ್ಕಾಗಿ 1,747 ಕೋಟಿ ರೂ.ಗಳನ್ನು ಮೀಸಲಿರಿಸಲಾಗಿದೆ. ಆರಂಭಿಕ ಹಂತದ ಮೂಲ ಸೌಲಭ್ಯಗಳನ್ನು ಯುಪಿ ಪೊಲೀಸ್ ವಿಶೇಷ ಘಟಕವಾಗಿರುವ ಪಿಎಸಿ(ಪ್ರೊವಿನ್ಶಿಯಲ್ ಆರ್ಮಡ್ ಕನ್‍ಸ್ಟಾಬುಲರಿ)ಯಿಂದ ಬಳಸಿಕೊಳ್ಳಬಹುದಾಗಿದೆ.
ಈ ಪೊಲೀಸ್ ಪಡೆಯ ಯಾವುದೇ ಸದಸ್ಯ ಯಾವುದೇ ವಾರೆಂಟ್, ಮ್ಯಾಜಿಸ್ಟ್ರೇಟ್ ಅನುಮತಿ ಪಡೆಯದೇ ಯಾವುದೇ ವ್ಯಕ್ತಿಯನ್ನು ಬಂಧಿಸಬಹುದಾಗಿದೆ. ಈ ವಿಭಾಗಕ್ಕಾಗಿ ಪ್ರತ್ಯೇಕ ನಿಯಮಗಳನ್ನು ರೂಪಿಸಲಾಗುತ್ತದೆ ಎಂದು ಟ್ವೀಟ್ ಮಾಡಿದ್ದಾರೆ.
ಸರ್ಕಾರದ ಈ ನಿರ್ಧಾರದ ಕುರಿತು ಹಲವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಪೊಲೀಸರಿಗೆ ಬಂಧಿಸುವ ಸಂಪೂರ್ಣ ಸ್ವಾತಂತ್ರ್ಯ ನೀಡಿರುವುದು ದುರ್ಬಳಕೆಯಾಗುವ ಸಂಭವವಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಆದರೆ ಯುಪಿಯಲ್ಲಿ ಅಪರಾಧ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇಂತಹ ಕಠಿಣ ಕಾನೂನು ಅಗತ್ಯ ಎಂದು ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.