ಬೆಂಗಳೂರು: ಐಸಿಎಂಆರ್ ಸಿರೋ ಸರ್ವೆಯಲ್ಲಿ ಶಾಲೆ ತೆರೆಯುವ ವಿಚಾರ ಪ್ರಸ್ತಾಪವಾಗಿದ್ದು, ಈ ಸಂಬಂಧ ಸಚಿವ ಡಾ. ಸುಧಾಕರ್ ಮಾತನಾಡಿ ಯಾವತ್ತೋ ಒಂದು ದಿನ ಶಾಲೆ ಆರಂಭ ಆಗಲೇ ಬೇಕು ಎಂದಿದ್ದಾರೆ.
ಸದಾಶಿವನಗರ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿ, ಈಗಾಗಲೇ ಮಕ್ಕಳ ಮಾನಸಿಕತೆ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ. ವೈದ್ಯಕೀಯ ತಜ್ಞರ ಅಭಿಪ್ರಾಯ ಪಡೆಯುತ್ತಿದ್ದೇವೆ. ಶಾಲಾ ಸಿಬ್ಬಂದಿಗೆ ಆದ್ಯತೆ ಮೇರೆ ಲಸಿಕೆ ಕೊಡುವ ಕೆಲಸ ಮಾಡುತ್ತೇವೆ. ಈ ಬಗ್ಗೆ ಸಿಎಂ ಹಾಗೂ ಸಚಿವರ ಸಭೆಯಲ್ಲಿ ತೀರ್ಮಾನ ಮಾಡುತ್ತೇವೆ. ಹಂತ ಹಂತವಾಗಿ ಶಾಲೆಗಳನ್ನು ಆರಂಭ ಮಾಡುವ ಬಗ್ಗೆ ಚಿಂತನೆ ನಡೆದಿದೆ. ನಿರಂತರವಾಗಿ ನಾವು ಐಸಿಎಂಆರ್ ಜೊತೆ ಸಂಪರ್ಕದಲ್ಲಿ ಇದ್ದೇವೆ ಎಂದು ಹೇಳಿದ್ದಾರೆ.
ಇದೇ ವೇಳೆ ರಾಜಕೀಯವಾಗಿ ನಾನು ಏನೂ ಮಾತಾಡಲ್ಲ ಎನ್ನುತ್ತಾ, ಪ್ರಸ್ತುತ ಸಿಎಂ ಬದಲಾವಣೆ ವಿಚಾರದಲ್ಲಿ ನೋ ರಿಯಾಕ್ಷನ್ ಎಂದಿದ್ದಾರೆ. ಜೊತೆಗೆ ನಮ್ಮ ನಾಯಕರು, ಹೈಕಮಾಂಡ್ ಏನು ತೀರ್ಮಾನ ತೆಗೆದು ಕೊಳ್ಳುತ್ತಾರೋ ಅದಕ್ಕೆ ನಾವು ಬದ್ಧವಾಗಿದ್ದೀವಿ. ಯಡಿಯೂರಪ್ಪ ನಮ್ಮ ನಾಯಕರು, ಅವರ ಬಗ್ಗೆ ಪದೇ ಪದೇ ನಾನು ಹೇಳಿಕೆ ಕೊಡಲ್ಲ. ಯಾರು ಬೇಕಾದರೂ ಅವರವರ ವೈಯಕ್ತಿಕ ಅಭಿಪ್ರಾಯ ಹೇಳಬಹುದು. ಮಠಾಧೀಶರು ಸಮಾಜದ ಒಳಿತು ಕಾಯುವವರು, ಅವರವರ ವೈಯಕ್ತಿಕ ಅಭಿಪ್ರಾಯ ಹೇಳಿರಬಹುದು. ನಾನು ಪದೇಪದೇ ಈ ವಿಚಾರ ಮಾತಾಡಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ:ಬಿಎಸ್‍ವೈ ಸಿಎಂ ಸ್ಥಾನದಿಂದ ಕೆಳಗಿಳಿದರೆ ದೇವೇಗೌಡರ ಜೊತೆ ಸೇರಿ ಪ್ರಾದೇಶಿಕ ಪಕ್ಷ ಕಟ್ಟಲಿ: ಜೆಡಿಎಸ್ ಶಾಸಕ