ಲಕ್ನೋ: ಮದುವೆ ಸಂಬಂಧ ಬ್ರೋಕರ್ಗಳನ್ನು ವಧು/ವರರು ಭೇಟಿಯಾಗುವುದು ಸಾಮಾನ್ಯ. ಆದರೆ ಉತ್ತರ ಪ್ರದೇಶದಲ್ಲಿ ವ್ಯಕ್ತಿಯೊಬ್ಬರು ಪೊಲೀಸ್ ಠಾಣೆಯ ಮೆಟ್ಟಿಲೇರಿ ಹುಡುಗಿ ಹುಡುಕಿಕೊಡಿ ಎಂದು ಮನವಿ ಮಾಡಿದ್ದಾರೆ.
ಉತ್ತರ ಪ್ರದೇಶದ ಶಾಮ್ಲಿ ಜಿಲ್ಲೆಯ 26 ವರ್ಷದ ಅಜೀಮ್ ಮನ್ಸೂರಿ ಮದುವೆಯಾಗಲು ಹುಡುಗಿ ಹುಡುಕಿಕೊಡುವಂತೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಆರು ಮಂದಿ ಒಡಹುಟ್ಟಿದವರಲ್ಲಿ ನಾನು ಮೂರನೇಯವನಾಗಿದ್ದು, ಹುಡುಗಿ ಯಾವುದೇ ಜಾತಿ, ಮತ, ಬಣ್ಣ ಅಥವಾ ಧರ್ಮದವಳಾಗಿದ್ದಳು ಪರವಾಗಿಲ್ಲ. ಓದಿರುವ ಹುಡುಗಿ ಬೇಕು ಎಂಬ ಬೇಡಿಕೆಯನ್ನು ಪೊಲೀಸರ ಮುಂದಿಟ್ಟಿದ್ದಾರೆ.
ಅಜೀಮ್ ಈ ಬೇಡಿಕೆ ಇಡಲು ಕಾರಣವಿದೆ. 3 ಅಡಿ 2 ಇಂಚು ಎತ್ತರ ಹೊಂದಿರುವ ವ್ಯಕ್ತಿಗೆ ತನ್ನ ದೇಹವೇ ಸಮಸ್ಯೆಯಾಗಿದೆ. ಕುಳ್ಳನಾಗಿರುವ ಕಾರಣ ಯಾರೂ ಇತನನ್ನು ಒಪ್ಪುತ್ತಿಲ್ಲ. ನನ್ನ ಕನಸು ಕನಸಾಗಿಯೇ ಉಳಿಯಬಹುದು ಎಂದು ಪೊಲೀಸರನ್ನು ಭೇಟಿಯಾಗಿ ಹುಡುಗಿ ಹುಡುಕಿಕೊಡುವಂತೆ ಮನವಿ ಮಾಡಿದ್ದಾರೆ.
ಅಜೀಮ್ ಮನ್ಸೂರಿ ಬೇಡಿಕೆಗೆ ಸ್ಪಂದಿಸಿದ ಪೊಲೀಸರು ಹೇಗಾದರೂ ಮದುವೆ ಮಾಡಿಸುವುದಾಗಿ ಇದೀಗ ಭರವಸೆ ನೀಡಿದ್ದಾರೆ. ಮನ್ಸೂರಿ ಕೈರಾನಾ ಪೊಲೀಸ್ ಠಾಣಾ ವ್ಯಾಪ್ತಿಯ ಮೊಹಲ್ಲಾ ಟ್ವಿನ್ ವಾಲ್ ನಿವಾಸಿಯಾಗಿದ್ದು, ಈವರೆಗೂ ಡಿಸಿಎಂ, ಎಸ್‍ಡಿಎಂ, ಮತ್ತು ರಾಜ್ಯದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‍ರಂತಹ ಅನೇಕ ಹಿರಿಯ ಅಧಿಕಾರಿಗಳಿಗೆ ಈ ವಿಚಾರವಾಗಿ ಅರ್ಜಿ ಸಲ್ಲಿಸಿರುವುದಾಗಿ ತಿಳಿಸಿದ್ದಾರೆ. ಆದರೆ ಇಲ್ಲಿಯವರೆಗೂ ಈ ಸಂಬಂಧ ಯಾವುದೇ ಪ್ರತಿಕ್ರಿಯೆ ದೊರೆಯದ ಕಾರಣ ಕೊನೆಗೆ ಪೊಲೀಸರ ಮೊರೆಹೋಗಿರುವುದಾಗಿ ಹೇಳಿದ್ದಾರೆ.