– ಚೆನ್ನೈ ಮೂಲದ ಪರಿಣಿತರಿಂದ ಹಂದಿ ಹಿಡಿಯುವ ಕಾರ್ಯಾಚರಣೆ
ಯಾದಗಿರಿ: ಹಂದಿಗಳ ಹಾವಳಿಗೆ ಯಾದಗಿರಿ ನಗರದ ಜನರು ಇಷ್ಟು ದಿನ ತತ್ತರಿಸಿ ಹೋಗಿದ್ದರು. ನಗರದ ಜನರು ಹಂದಿಗಳ ಸ್ಥಳಾಂತರ ಮಾಡುವಂತೆ ಒತ್ತಾಯ ಮಾಡಿದ ಹಿನ್ನೆಲೆ ಇಂದು ನಗರಸಭೆ ಅಧಿಕಾರಿಗಳ ನೇತೃತ್ವದಲ್ಲಿ ಹಂದಿಗಳನ್ನು ರಕ್ಷಣೆ ಮಾಡಿ ಸ್ಥಳಾಂತರ ಮಾಡುವ ಕೆಲಸ ನಡೆಯುತ್ತಿದೆ.
ಗಾಂಧಿನಗರ, ತಾಂಡಾ, ಮದನಪುರ ಸೇರಿದಂತೆ ಹಲವು ಕಡೆ ಹಂದಿಗಳ ಹಾವಳಿ ಹೆಚ್ಚಾಗಿತ್ತು. ಕೆಲದಿನಗಳ ಹಿಂದೆ ಹಂದಿಗಳು ಮಕ್ಕಳಿಗೆ ಕಚ್ಚಿ ಗಾಯಗೊಳಿಸಿದ್ದವು. ಪರಿಣಾಮ ಯಾದಗಿರಿ ನಗರದ ಜನರು ಹಂದಿಗಳನ್ನು ಸ್ಥಳಾಂತರ ಮಾಡುವಂತೆ ನಗರಸಭೆಗೆ ಒತ್ತಾಯ ಮಾಡಿದ್ದರು. ಈ ಬಗ್ಗೆ ಸಾಕಷ್ಟು ಬಾರಿ ನಗರಸಭೆ ಅಧಿಕಾರಿಗಳು ಹಂದಿಗಳ ಸಾಕಾಣಿಕೆ ಮಾಡುವ ಮಾಲಿಕರಿಗೆ ನೊಟೀಸ್ ನೀಡಿ ಎಚ್ಚರಿಕೆ ನೀಡಿದ್ದರು. ಆದರೂ ಹಂದಿಗಳು ತಮ್ಮ ಉಪಟಳ ಮುಂದುವರಿಸಿದ್ದವು.
ಇದರಿಂದ ಬೇಸರಗೊಂಡ ನಗರಸಭೆ ಅಧಿಕಾರಿಗಳು ಹಂದಿಗಳ ಸ್ಥಳಾಂತರ ಮಾಡಲು ಟೆಂಡರ್ ಕರೆದಿದ್ದರು. ಚೆನ್ನೈ ಮೂಲದ ಗುತ್ತಿಗೆದಾರನಿಗೆ ಹಂದಿ ಹಿಡಿಯುವ ಟೆಂಡರ್ ಆಗಿದ್ದು, ಇಂದು ನಗರಸಭೆ ಅಧಿಕಾರಿಗಳ ನೇತೃತ್ವದಲ್ಲಿ, ಹಂದಿಗಳನ್ನು ರಕ್ಷಣೆ ಮಾಡಿ ಸ್ಥಳಾಂತರ ಮಾಡುವ ಕೆಲಸವನ್ನು ಮಾಡಲಾಗಿದೆ. ಚೆನ್ನೈ ಮೂಲದ 20 ನುರಿತ ವ್ಯಕ್ತಿಗಳು ಈ ಹಂದಿ ಹಿಡಿಯುವ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದಾರೆ.