ಯಾದಗಿರಿ: ಜಿಲ್ಲೆಯ ಸುರಪುರ ತಾಲೂಕಿನ ಹಾಲಾಳ ಗ್ರಾಮದ ವ್ಯಾಪ್ತಿಯಲ್ಲಿ ನಡೆಯುತ್ತಿದ್ದ ಅಕ್ರಮ ಗಣಿಗಾರಿಕೆ ಸ್ಥಳದ ಮೇಲೆ ಆಂತರಿಕ ಭದ್ರತಾ ವಿಭಾಗ(ಐಎಸ್‍ಡಿ) ತಂಡ ದಾಳಿ ನಡೆಸಿದ್ದು, ಅಪಾರ ಪ್ರಮಾಣದ ಸ್ಫೋಟಕವನ್ನು ವಶಕ್ಕೆ ಪಡೆದಿದೆ.
ಮುದ್ದೇಬಿಹಾಳ ಮೂಲದ ಶಾಂತಗೌಡ ನಡಹಳ್ಳಿ ಎಂಬವರು ಜಿಲ್ಲೆಯ ಹಾಲಾಳ ಬಳಿಯ ಜಮೀನಿನಲ್ಲಿ ಕಳೆದ ನಾಲ್ಕು ವರ್ಷಗಳಿಂದ ಅಕ್ರಮವಾಗಿ ಕಲ್ಲು ಕ್ವಾರಿಯನ್ನು ನಡೆಸುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದ ಕಲಬುರಗಿ-ಯಾದಗಿರಿ ಐಎಸ್‍ಡಿ ಪೊಲೀಸರು ಇಂದು ಬೆಳಗ್ಗೆ ಕ್ವಾರಿ ಮೇಲೆ ದಾಳಿ ಮಾಡಿದ್ದಾರೆ.
ಕಲ್ಲು ಬ್ಲಾಸ್ಟ್ ಮಾಡಲು ಅಕ್ರಮವಾಗಿ ಸಂಗ್ರಹಿಸಿದ್ದ 30 ಬಾಕ್ಸ್ ಐಡಿಎಲ್ 80 ಎಂಎಂ ಬೂಸ್ಟರ್ ಸೇರಿದಂತೆ ಸ್ಫೋಟಕ್ಕೆ ಬಳಸುವ ಸುಮಾರು 750 ಕೆಜಿ ಬೂಸ್ಟರ್ ವಶಕ್ಕೆ ಪಡೆಯಲಾಗಿದೆ.
ಐಎಸ್‍ಡಿ ಪಿಐ ಅಡೆಪ್ಪ ಬನ್ನಿ ನೇತೃತ್ವದಲ್ಲಿ ಸಿಬ್ಬಂದಿ ಶಾಂತಯ್ಯ, ನಾಗರಾಜ್, ರಾಜಕುಮಾರ್, ದೊಡ್ಡೇಶ್, ಪ್ರಕಾಶ್ ಎಂಬ ಅಧಿಕಾರಿಗಳ ತಂಡ ದಾಳಿ ನಡೆಸಿದೆ. ಕಳೆದ ನಾಲ್ಕು ವರ್ಷಗಳಿಂದ ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಯುತ್ತಿತ್ತು ಎಂಬ ಮಾಹಿತಿ ದೊರೆತಿದೆ.