– ಉದ್ಘಾಟನೆ ವೇಳೆ ಮಷೀನ್ ವರ್ಕ್ ಆಗದ್ದಕ್ಕೆ ಅಧಿಕಾರಿಗಳ ವಿರುದ್ಧ ಕಿಡಿ
ಹಾಸನ: ಸರಿಯಾಗಿ ಕೆಲಸ ಮಾಡದ ನಿಮ್ಮನ್ನೆಲ್ಲ ಬಲಿಹಾಕ್ತೀನಿ ಎಂದು ಮಾಜಿ ಸಚಿವ ಹೆಚ್‍ಡಿ.ರೇವಣ್ಣ ಆಕ್ರೋಶ ಹೊರಹಾಕಿದ ಘಟನೆ ಹಾಸನ ಜಿಲ್ಲೆ, ಚನ್ನರಾಯಪಟ್ಟಣ ತಾಲ್ಲೂಕಿನ, ಆಲಗೊಂಡನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಇಂದು ಆಲಗೊಂಡನಹಳ್ಳಿ ಏತ ನೀರಾವರಿ ಯೋಜನೆ ಮೂಲಕ 26 ಕೆರೆಗಳ ತುಂಬಿಸುವ ಯೋಜನೆ ಉದ್ಘಾಟನೆ ವೇಳೆ ರೇವಣ್ಣ ಬಟನ್ ಪ್ರೆಸ್ ಮಾಡಿದರೂ ಮಷೀನ್ ವರ್ಕ್ ಆಗಲಿಲ್ಲ. ಎರಡು ಮೂರು ಸಲ ಪ್ರಯತ್ನಿಸಿದರೂ ಮಷೀನ್ ಆನ್ ಆಗದಿದ್ದಾಗ ಆಕ್ರೋಶ ಹೊರಹಾಕಿದ್ದು, ಕೆಲಸ ಆಗಿ ಈಗಾಗಲೇ ಒಂದು ವರ್ಷ ಆಗಬೇಕಿತ್ತು. ಇಂತಹ ಕಾಮಗಾರಿಗಳನ್ನು ಒಳ್ಳೆಯ ಕಂಪನಿಗೆ ಕೊಡಿ. ಯಾಕೆ ಇಂತಹವರಿಗೆಲ್ಲ ಕೆಲಸ ಕೊಡುತ್ತೀರಿ, ನಿಮ್ಮನ್ನೆಲ್ಲ ಬಲಿಹಾಕ್ತೀವಿ ಎಂದು ಕಂಟ್ರ್ಯಾಕ್ಟರ್ ವಿರುದ್ಧ ಆಕ್ರೋಶ ಹೊರಹಾಕಿದರು. ಸಣ್ಣಪುಟ್ಟ ಬದಲಾವಣೆ ನಂತರ ಅಂತಿಮವಾಗಿ ಮಷೀನ್ ಆನ್ ಆಯಿತು.
ನಂತರ ಸಾರ್ವಜನಿಕ ಸಭೆಯಲ್ಲಿ ಪೊಲೀಸರಿಗೆ ಕ್ಲಾಸ್ ತೆಗೆದುಕೊಂಡ ರೇವಣ್ಣ, ಚನ್ನರಾಯಪಟ್ಟಣ ಹೊರವಲಯದಲ್ಲಿ ಬಡಾವಣೆ ಮಾಡಲಾಗುತ್ತಿದೆ. ಯಾರ್ರಿ ಇಲ್ಲಿ ಸಬ್ ಇನ್‍ಸ್ಪೆಕ್ಟರ್? ಯಾಕ್ರೀ ದೂರು ತಗೋತಿಲ್ಲಾ? ಸಿಕ್ಕ ಸಿಕ್ಕ ಕಡೆ ನಿವೇಶನ ಮಾಡಿದರೆ ರಸ್ತೆ ಮಾಡೋರು, ಕುಡಿಯೋ ನೀರು ಕೊಡೋರು ಯಾರು? ಹಳ್ಳಿಯ ಹತ್ತು ಎಕರೆ ಕರಾಬು ಭೂಮಿ ಲಪಟಾಯಿಸಿ ಬಡಾವಣೆ ಮಾಡುತ್ತಿದ್ದಾರೆ. ಪಂಚಾಯಿತಿ ಕಾರ್ಯದರ್ಶಿ ದೂರು ನೀಡಿದರೂ ಯಾಕೆ ಕೇಸ್ ಮಾಡಿಲ್ಲ? ನೀವು ಅವರೊಟ್ಟಿಗೆ ಶಾಮೀಲಾಗಿದ್ದೀರಾ? ಇವತ್ತು ಸಂಜೆಯೊಳಗೆ ಕೇಸ್ ಆಗ್ಬೇಕು. ಇಲ್ಲವಾದರೆ ಇಂದು ಸಂಜೆ ಪೊಲೀಸ್ ಠಾಣೆ ಎದುರು ಧರಣಿ ಕೂರ್ತೀನಿ. ಇಲ್ಲವೇ ಐಜಿ ಬಳಿ ಮಾತನಾಡಿ, ಅಮಾನತು ಮಾಡಿಸುತ್ತೇನೆ ಎಂದು ಕಿಡಿಕಾರಿದರು.