– ಅಪ್ಪಾಜಿ ಫೋನ್ ಸಂಭಾಷಣೆ ವಿಡಿಯೋ ಹಂಚಿಕೊಂಡ ರಾಘಣ್ಣ
ಬೆಂಗಳೂರು: ನನ್ನ ಯಶಸ್ಸಿನಲ್ಲಿ ನನ್ನ ಪ್ರಯತ್ನ ಕಮ್ಮಿ ಭಗವಂತನ ಯತ್ನ ಜಾಸ್ತಿ ಎಂದು ಹೇಳಿದ್ದ ಡಾ. ರಾಜ್‍ಕುಮಾರ್ ಅವರ ಫೋನ್ ಸಂಭಾಷಣೆಯನ್ನು ಹಿರಿಯ ನಟ ರಾಘವೇಂದ್ರ ರಾಜ್‍ಕುಮಾರ್ ಅವರು ತಮ್ಮ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ.
ವರನಟ ಡಾ.ರಾಜ್‍ಕುಮಾರ್ ಅವರನ್ನು ಕನ್ನಡ ಚಿತ್ರರಂಗದ ಕಲಶ ಎಂದೇ ಕರೆಯಲಾಗುತ್ತದೆ. ಅಭಿಮಾನಿಗಳನ್ನೇ ದೇವರು ಎಂದು ಕರೆಯುತ್ತಿದ್ದ ಮುತ್ತುರಾಜ್ ಕನ್ನಡ ಚಿತ್ರರಸಿಕರ ಹೃದಯದಲ್ಲಿ ಎಂದಿಗೂ ಜೀವಂತ. ಈಗ ಅಣ್ಣಾವ್ರು ಯಾವುದೋ ವ್ಯಕ್ತಿಯ ಜೊತೆ ಫೋನ್ ಸಂಭಾಷಣೆಯಲ್ಲಿ ತೊಡಗಿರುವ ವಿಡಿಯೋವನ್ನು ರಾಘಣ್ಣ ಅವರು ಶೇರ್ ಮಾಡಿದ್ದಾರೆ.
ಅಪ್ಪಾಜಿಯ ಅಪರೂಪದ ಫೋನ್ ಸಂಭಾಷಣೆ..
Rare video of Appaji talking on the phone. pic.twitter.com/NPnlJzvYor
— Raghavendra Rajkumar (@RRK_Official_) July 3, 2020
ಸುಮಾರು 2 ನಿಮಿಷ 20 ಸೆಕೆಂಡ್ ಇರುವ ವಿಡಿಯೋದಲ್ಲಿ ಅಣ್ಣಾವ್ರು ಫೋನಿನಲ್ಲಿ ಮಾತನಾಡಿದ್ದಾರೆ. ಈ ವೇಳೆ ಅವರ ತಂದೆಯ ಬಗ್ಗೆ ಮತ್ತು ಅವರ ಯಶಸ್ಸಿನ ಬಗ್ಗೆ ಮಾತನಾಡಿದ್ದಾರೆ. ಈ ವಿಡಿಯೋವನ್ನು ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಹಾಕಿಕೊಂಡಿರುವ ರಾಘಣ್ಣ ಅಪ್ಪಾಜಿಯ ಅಪರೂಪದ ಫೋನ್ ಸಂಭಾಷಣೆ ಎಂದು ಬರೆದುಕೊಂಡಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ವಿಡಿಯೋದಲ್ಲಿ ಮಾತನಾಡಿರುವ ರಾಜ್‍ಕುಮಾರ್ ಅವರು, ಇಂದು ನಾನು ಈ ಮಟ್ಟಕ್ಕೆ ಬರಲು ನಮ್ಮ ತಂದೆಯವರು ಕಲಿಸಿಕೊಟ್ಟ ಶಿಸ್ತೇ ಕಾರಣ. ಅವರು ಯಾವಗಲೂ ನನ್ನನ್ನು ಹೆದುರಿಸುತ್ತಿದ್ದರು. ನನ್ನ ಗುಣ, ಮಾತು, ನಡವಳಿಕೆಯನ್ನು ಗಮನಿಸಿ ಇದನ್ನು ತಿದ್ದಿಕೋ ಎಂದು ಹೇಳುತ್ತಿದ್ದರು. ಜೊತೆಗೆ ನಿಮ್ಮನ್ನು ಓದಿಸಲು ನನ್ನ ಕೈಲಿ ಆಗಲಿಲ್ಲ. ಆದ್ದರಿಂದ ಹೆದುರಿಸುತ್ತೇನೆ. ನನ್ನ ಮಾತಿನ ಪರಿಣಾಮವನ್ನು ನೀನು ಮುಂದೆ ನೋಡುತ್ತೀಯಾ ಎಂದು ಹೇಳಿದ್ದರು ಎಂದು ಅಣ್ಣಾವ್ರು ತಮ್ಮ ಅಪ್ಪನ ಬಗ್ಗೆ ಮಾತನಾಡಿದ್ದಾರೆ.
ಜೊತೆಗೆ ನನ್ನ ಯಶಸ್ಸು ನನಗೆ ತಾನಾಗಿಯೇ ಬಂದ ಫಲ ಎಂದು ಹೇಳಬಹುದು. ನನ್ನ ಯಶಸ್ಸಿನಲ್ಲಿ ನನ್ನ ಪ್ರಯತ್ನ ಕಮ್ಮಿ ಭಗವಂತನ ಯತ್ನ ಜಾಸ್ತಿ. ಈ ಭಗವಂತನನ್ನು ಎಲ್ಲಿ ನೋಡಲು ಸಾಧ್ಯ? ಅದಕ್ಕೆ ನಾನು ಈ ಹಿಂದೆ ನನಗೆ ಕರ್ನಾಟಕ ರತ್ನ ಪ್ರಶಸ್ತಿ ಕೊಟ್ಟಾಗ ಲಕ್ಷಾಂತರ ಜನರ ಮುಂದೆ ಹೇಳಿದ್ದೆ. ಏನೆಂದರೆ ನಾನು ದೇವರನ್ನು ನೋಡಿದ್ದೇನೆ. ಆ ದೇವರು ಯಾರೆಂದರೆ ಅಭಿಮಾನಿಗಳೇ ನನ್ನ ದೇವರು ಎಂದು ಹೇಳಿದ್ದನ್ನು ರಾಜ್‍ಕುಮಾರ್ ಅವರು ಸಂಭಾಷಣೆ ವೇಳೆ ನೆನಪಿಸಿಕೊಂಡಿದ್ದಾರೆ.
ರಾಜ್‍ಕುಮಾರ್ ಅವರು ಗುಬ್ಬಿ ವೀರಣ್ಣ ಕಂಪನಿಯಲ್ಲಿ ನಾಟಕ ಮಾಡುತ್ತಿದ್ದರು. ಈ ವೇಳೆ 1954ರಲ್ಲಿ ಬೇಡರ ಕಣ್ಣಪ್ಪ ಎಂಬ ಸಿನಿಮಾ ಮಾಡಿ ಚಿತ್ರರಂಗಕ್ಕೆ ಪಾದಾರ್ಪಾಣೆ ಮಾಡಿದ್ದರು. ಇದಾದ ನಂತರ ರಾಜ್ ಹಿಂತಿರುಗಿ ನೋಡಲೇ ಇಲ್ಲ. ಅಣ್ಣಾವ್ರು ತನ್ನ ವೃತ್ತಿ ಜೀವನದಲ್ಲಿ ಸುಮಾರು 210 ಸಿನಿಮಾಗಳನ್ನು ಮಾಡಿದ್ದಾರೆ. ಜೊತೆಗೆ ಹಲವಾರು ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿಯನ್ನು ಗೆದ್ದು, ಕನ್ನಡಿಗರ ಹೃದಯದಲ್ಲಿ ಇಂದಿಗೂ ರಾರಾಜಿಸುತ್ತಿದ್ದಾರೆ.