ಬೆಂಗಳೂರು: ವಕೀಲರ ಸೂಚನೆಯಂತೆ ದೂರು ಕೊಟ್ಟಿದ್ದೇನೆ. ಇದೊಂದು ರಾಜಕೀಯ ಷಡ್ಯಂತ್ರವಾಗಿದ್ದು, ಯಶವಂತಪುರದಲ್ಲಿಯೇ ನನ್ನ ವಿರುದ್ಧ ಮಸಲತ್ತು ಹೂಡಲಾಗಿದೆ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.
ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವರು ದೂರು ದಾಖಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಸಿಡಿ ಪ್ರಕರಣ ಸಂಬಂಧ ಈಗಾಗಲೇ ದೂರು ಕೊಟ್ಟಿದ್ದೇನೆ. ವಕೀಲರ ಸೂಚನೆಯ ಮೇರೆಗೆ ಈ ದೂರನ್ನು ನೀಡಿದ್ದೇನೆ ಎಂದು ತಿಳಿಸಿದ್ದಾರೆ.
ಸಿಡಿ ವಿಚಾರದಲ್ಲಿ ಕಾನೂನು ಹೋರಾಟ ನಡೆಸಲಾಗುತ್ತಿದ್ದು, ಇಂದಿನಿಂದ ಈ ಹೋರಾಟ ಆರಂಭವಾಗಿದೆ. ಎರಡ್ಮೂರು ದಿನಗಳಲ್ಲಿ ತನಿಖೆಯ ಮಾಹಿತಿ ಸಿಗಲಿದೆ. ಸುಲಿಗೆ ಬಗ್ಗೆ ನಾನು ಏನೂ ಹೇಳಲ್ಲ. ಮುಂದಿನ ದಿನಗಳಲ್ಲಿ ಎಲ್ಲರ ಹೆಸರು ಬಹಿರಂಗಪಡಿಸುತ್ತೇನೆ. ಆ ಮಹಾನಾಯಕನ ಹೆಸರನ್ನು ಶೀಘ್ರವೇ ಬಹಿರಂಗಪಡಿಸುತ್ತೇನೆ. ನೂರಾರು ಕೋಟಿ ಷಡ್ಯಂತ್ರ ಮಾಡಿದ್ದಾರೆ ಎಂದು ಮಾಜಿ ಸಚಿವರು ಹೇಳಿದ್ದಾರೆ.
ಮಾರ್ಚ್ 2ರಂದು ಮಾಜಿ ಸಚಿವರ ಸಿಡಿ ಬಿಡುಗಡೆಗೊಂಡಿತ್ತು. ಈ ಸಿಡಿ ಹೊರಬರುತ್ತಿದ್ದಂತೆಯೇ ರಾಜ್ಯ ರಾಜಕೀಯದಲ್ಲಿ ಅಲ್ಲೋಲ ಕಲ್ಲೋಲವೇ ಸೃಷ್ಟಿಯಾಯಿತು. ಈ ಸಂಬಂಧ ಮಾತನಾಡಿದ್ದ ರಮೇಶ್, ನನ್ನದೇನೂ ತಪ್ಪಿಲ್ಲ. ನಾನು ಯಾವ ತಪ್ಪು ಮಾಡಿಲ್ಲ ಎಂದು ಹೇಳಿಕೆ ನೀಡಿದ್ದರು. ಅದಾದ ಬಳಿಕ ಸಿಡಿ ಬಗ್ಗೆ ಭಾರೀ ಚರ್ಚೆಯಾಗಿತ್ತು. ಶುಕ್ರವಾರವಷ್ಟೇ ಪ್ರಕರಣವನ್ನು ಎಸ್‍ಐಟಿ ತನಿಖೆಗೆ ಒಪ್ಪಿಸುವುದಾಗಿ ಗೃಹ ಸಚಿವ ಬೊಮ್ಮಾಯಿ ಹೇಳಿದ್ದರು. ಅದರಂತೆ ನಿನ್ನೆ ತಾನೇ ಎಸ್‍ಐಟಿ ಟೀಂ ರಚನೆಗೊಂಡಿದ್ದು, ಮೊದಲ ದಿನವೇ ಐವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿತ್ತು.
ಎಸ್‍ಐಟಿ ತನಿಖೆಯ ಬೆನ್ನಲ್ಲೇ ಇತ್ತ ಇಂದು ಸಂಜೆ ರಮೇಶ್ ಜಾರಕಿಹೊಳಿ ಅವರು ತಮ್ಮ ಆಪ್ತ ನಾಗರಾಜ್ ಮೂಲಕ ಪ್ರಕರಣ ಸಂಬಂಧ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು,. ಇದೀಗ ಅಪರಿಚಿತರ ಮೇಲೆ ಎಫ್‍ಐಆರ್ ಕೂಡ ದಾಖಲಾಗಿದೆ.