ಯಲ್ಲಾಪುರ, ಅಂಕೋಲಾದಲ್ಲಿ ಸಿಎಂ ಪ್ರವಾಹ ವೀಕ್ಷಣೆ – ಚಿಕ್ಕೋಡಿ, ಯಾದಗಿರಿ, ರಾಯಚೂರಲ್ಲಿ ಅವಾಂತರ

Public TV
3 Min Read
Bommai Flood 1

ಬೆಂಗಳೂರು: ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಮಾರನೇ ದಿನವೇ ಸಿಎಂ ಬಸವರಾಜ ಬೊಮ್ಮಾಯಿ ಅವರು ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ್ದಾರೆ. ಬೆಂಗಳೂರಿಂದ ಹುಬ್ಬಳ್ಳಿಗೆ ವಿಮಾನದ ಮೂಲಕ ತೆರಳಿ, ಅಲ್ಲಿಂದ ರಸ್ತೆ ಮಾರ್ಗವಾಗಿ ಉತ್ತರ ಕನ್ನಡ ತಲುಪಿದರು. ಯಲ್ಲಾಪುರದ ಸರ್ಕಾರಿ ಆಸ್ಪತ್ರೆಯಲ್ಲಿ ಡಯಾಲಿಸಸ್ ಕೇಂದ್ರ, ಆಂಬ್ಯೂಲೆನ್ಸ್ ಸೇವೆ ಉದ್ಘಾಟಿಸಿದರು. ಬಳಿಕ ಮಳೆಯಿಂದ ಗುಡ್ಡ ಕುಸಿತವಾಗಿದ್ದ ಕಳಚೆ ಗ್ರಾಮವನ್ನು ಮಳೆಯಲ್ಲೇ ಪರಿಶೀಲಿಸಿದರು. ಬಳಿಕ ಅರೆಬೈಲ್, ಗುಳ್ಳಾಪುರದ ಕುಸಿದ ಬ್ರಿಡ್ಜ್, ಮನೆ ಹಾನಿ ವೀಕ್ಷಿಸಿದರು.

Bommai Flood 2

ಮಾಜಿ ಸಚಿವ ಶಿವರಾಮ್ ಹೆಬ್ಬಾರ್, ಅಧಿಕಾರಿಗಳಿಂದ ಮಾಹಿತಿ ಪಡೆದ ನಂತರ ಅಂಕೋಲದಲ್ಲೂ ಪ್ರವಾಹ ತಂದ ಅವಾಂತರ ವೀಕ್ಷಿಸಿದ್ರು. ಈ ವೇಳೆ ಶಾಲೆಗೆ ಹೋಗಲು ಆಗ್ತಿಲ್ಲ ಅಂತ ವಿದ್ಯಾರ್ಥಿಗಳು ಕಣ್ಣೀರು ಹಾಕಿದ್ರು. ಶಿರೂರು ಕಾಳಜಿ ಕೇಂದ್ರದಲ್ಲಿ ಸಂತ್ರಸ್ತರ ಅಹವಾಲು ಸ್ವೀಕರಿಸಿ ಸಮರೋಪಾದಿಯಲ್ಲಿ ಪರಿಹಾರ ಕಾರ್ಯ ಕೈಗೊಳ್ತೇವೆ. ಎನ್‍ಡಿಆರ್ ಎಫ್‍ನಿಂದ ಪರಿಹಾರ ಬಂದಿದೆ ಅಂತ ಹೇಳಿದರು.

Bommai Father Mother Statue 2

ಮುಖ್ಯಮಂತ್ರಿಯಾದ ಬಳಿಕ ಮೊದಲ ಬಾರಿಗೆ ಬಸವರಾಜ ಬೊಮ್ಮಾಯಿ ಅವರು ಹುಬ್ಬಳ್ಳಿಗೆ ತೆರಳಿದರು. ಹುಬ್ಬಳ್ಳಿಯಲ್ಲಿ ಆರ್‍ಎಸ್‍ಎಸ್ ನಾಯಕರನ್ನು ಹಾಗೂ ರಂಭಾಪುರ ವೀರ ಸಿಂಹಾಸನಾಧೀಶ್ವರ ಸ್ವಾಮೀಜಿಯವರನ್ನು ಭೇಟಿಯಾಗಿ ಆಶೀರ್ವಾದ ಪಡೆದರು. ಧಾರವಾಡ ಹೊರವಲಯದ ರಾಯಪುರದಲ್ಲಿರೋ ತಂದೆ-ತಾಯಿ ಸಮಾಧಿಗೆ ನಮಿಸಿ ನಾಡಿನ ಸೇವೆಗೆ ಶಕ್ತಿ ಕೊಡಿ ಅಂತ ಕೇಳಿಕೊಂಡಿದ್ದೇನೆ ಎಂದು ಹೇಳಿದರು.

Bommai Father Mother Statue 1

ಉತ್ತರ ಕರ್ನಾಟಕದಲ್ಲಿ ಮಳೆ ನಿಂತಿದ್ದರೂ ಪ್ರವಾಹ ತಂದ ಅವಾಂತರ ಒಂದೊಂದಾಗಿ ಬೆಳಕಿಗೆ ಬರ್ತಿದೆ. ಮಹಾರಾಷ್ಟ್ರದ ಜಲಾಶಯಗಳ ನೀರು ಭಾರೀ ಸಮಸ್ಯೆ ತಂದೊಡ್ಡಿದೆ. ಚಿಕ್ಕೋಡಿ, ಅಥಣಿ, ರಾಯಬಾಗ, ಕಾಗವಾಡ ತಾಲೂಕುಗಳ ಕೃಷ್ಣಾ ನದಿ ತೀರ ಅಕ್ಷರಶಃ ನಲುಗಿ ಹೋಗಿದೆ. ಚಿಕ್ಕೋಡಿ ತಾಲೂಕಿನ 11 ಗ್ರಾಮಗಳು, ರಾಯಬಾಗ ತಾಲೂಕಿನ 18 ಗ್ರಾಮಗಳು, ಅಥಣಿ ತಾಲೂಕಿನ 22 ಗ್ರಾಮಗಳು ಹಾಗೂ ಕಾಗವಾಡ ತಾಲೂಕಿನ 7 ಗ್ರಾಮಗಳು ಜಲಾವೃತಗೊಂಡಿದ್ದು ಒಟ್ಟು 45 ಸಾವಿರಕ್ಕೂ ಹೆಚ್ಚಿನ ಜನರನ್ನ ಸ್ಥಳಾಂತರ ಮಾಡಲಾಗಿದೆ. ರಾಯಬಾಗ ತಾಲೂಕಿನ ಭಿರಡಿ ಗ್ರಾಮದಲ್ಲಿ ಶಾಸಕ ದುರ್ಯೋಧನ ಐಹೊಳೆಗೆ ಸಂತ್ರಸ್ತರು ತರಾಟೆ ತೆಗೆದುಕೊಂಡಿದ್ದಾರೆ.

ಯಾದಗಿರಿಯ ಬಸವಸಾಗರ ಜಲಾಶಯದಿಂದ 4 ಲಕ್ಷಕ್ಕೂ ಅಧಿಕ ಪ್ರಮಾಣದಲ್ಲಿ ನೀರು ಬಿಡುಗಡೆ ಮಾಡಲಾಗಿದೆ. ತಿಂಥಣಿ ಗ್ರಾಮದ ಜಲಾವೃತ ಭೀತಿಯಿಂದ ಗ್ರಾಮಸ್ಥರು ಮನೆ ಖಾಲಿ ಮಾಡಿದ್ದಾರೆ. ಸುರಪುರ ತಾಲೂಕಿನ ನೀಲಕಂಠರಾಯನಗಡ್ಡಿ ಗ್ರಾಮದ ಸಂಪರ್ಕ ಸೇತುವೆ ಕೃಷ್ಣಾ ನದಿಯ ಪ್ರವಾಹಕ್ಕೆ ಸಂಪರ್ಕ ಕಳೆದುಕೊಂಡಿದೆ. ರಾಯಚೂರಿನ ದೇವದುರ್ಗದ ಕೊಪ್ಪರ ಗ್ರಾಮಕ್ಕೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತವಾಗಿದೆ. ಲಕ್ಷ್ಮೀ ನರಸಿಂಹಸ್ವಾಮಿ ಹಾಗೂ ಬಸವಣ್ಣ ದೇವಾಲಯಗಳು ಮುಳುಗಿವೆ. ಪಂಪ್ ಸೆಟ್‍ಗಳು ಕೊಚ್ಚಿಹೋಗಿವೆ. ಆದರೂ, ಸೇತುವೆ ಮೇಲೆ ಕಾರು ಚಾಲಕ ದುಸ್ಸಾಹಸ ಮಾಡಿದ್ದಾನೆ. ಇತ್ತ, ಕೊಡಗಿನ ವಿರಾಜಪೇಟೆ ಪಟ್ಟಣದ ನೆಹರು ನಗರ, ಮಲೆತಿರಿಕೆ ಬೆಟ್ಟದಲ್ಲಿ ಭಾರೀ ಪ್ರಮಾಣದಲ್ಲಿ ಬಿರುಕು ಬಿಟ್ಟಿದೆ. ಇದನ್ನೂ ಓದಿ: ಮತ್ತೆ ಏರಿಕೆಯತ್ತ ಕೊರೊನಾ- ಬಹುದಿನಗಳ ಬಳಿಕ ರಾಜ್ಯದಲ್ಲಿ 2 ಸಾವಿರಕ್ಕೂ ಅಧಿಕ ಕೇಸ್

ಇತ್ತ, ವಿಪಕ್ಷ ನಾಯಕ ಸಿದ್ದರಾಮಯ್ಯ ಮಾತಾಡಿ, ಪ್ರವಾಹ ಪೀಡಿದ ಜನರಿಗೆ ಇವರಿಂದ ಸಹಾಯ ನಿರೀಕ್ಷಿಸಲು ಸಾಧ್ಯವಿಲ್ಲ. ಕಳೆದ ವರ್ಷದ್ದೇ ಪರಿಹಾರ ಕೊಟ್ಟಿಲ್ಲ. ಆಗಸ್ಟ್ 1 ರಂದು ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡೋದಾಗಿ ಹೇಳಿದ್ರು. ಈ ಮಧ್ಯೆ, ಮಾಜಿ ಸಿಎಂ ಕುಮಾರಸ್ವಾಮಿ ಅವರು ನೀರಾವರಿ ಯೋಜನೆ ಸಂಬಂಧ ರಾಜ್ಯಪಾಲರ ಮೂಲಕ ರಾಷ್ಟ್ರಪತಿಗಳಿಗೆ ದೂರು ನೀಡಿದ್ದಾರೆ. ಮಹದಾಯಿ, ಮೇಕೆದಾಟು ಮತ್ತು ಕೃಷ್ಣ ಮೇಲ್ದಂಡೆ 3ನೇ ಹಂತದ ಯೋಜನೆಗೆ ಕೇಂದ್ರ ಅನ್ಯಾಯ ಮಾಡಿದೆ ಅಂತ ವಿಧಾನಸೌಧದ ಗಾಂಧಿ ಪ್ರತಿಮೆಯಿಂದ ರಾಜಭವನದವರೆಗೆ ಪಾದಯಾತ್ರೆ ನಡೆಸಿದರು. ಇದನ್ನೂ ಓದಿ: ನಾನು ಬಿಜೆಪಿ ಶಿಸ್ತಿನ ಸಿಪಾಯಿ, ಡಿಸಿಎಂ ಸ್ಥಾನಕ್ಕೆ ಲಾಬಿ ಮಾಡಲ್ಲ: ರಾಮುಲು

Share This Article
Leave a Comment

Leave a Reply

Your email address will not be published. Required fields are marked *