– ‘ತಾಕತ್ತಿದ್ದರೆ ತಡೆದು ನೋಡಿ’
ದಾವಣಗೆರೆ: ಬೆಂಗಳೂರಿನ ಯಲಹಂಕ ಫ್ಲೈಓವರಿಗೆ ಸಾವರ್ಕರ್ ನಾಮಕರಣ ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ. ತಾಕತ್ತಿದ್ದರೆ ತಡೆದು ನೋಡಿ ಎಂದು ದಾವಣಗೆರೆಯಲ್ಲಿ ಬಿಜೆಪಿ ಯುವ ಮೋರ್ಚಾ ರಾಜ್ಯ ಉಪಾಧ್ಯಕ್ಷ ಭೀಮಾಶಂಕರ ಪಾಟೀಲ್ ವಿರೋಧಿ ಪಕ್ಷಗಳಿಗೆ ಸವಾಲೆಸೆದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಾವರ್ಕರ್ ಹೆಸರು ಕೇಳಿದರೆ ಏಕೆ ಚೇಳು ಕಡಿದಂತೆ ಆಗುತ್ತೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದರು. ಈಗಿನ ಕಾಂಗ್ರೆಸ್ ನಾಯಕರಿಗೆ ಸಾವರ್ಕರ್ ಹೆಸರು ಕೇಳಿದರೆ ಇಷ್ಟೋಂದು ಹೆದರಿಕೆ ಆಗುತ್ತೆ. ಸ್ವಾತಂತ್ರ್ಯ ಪೂರ್ವದ ಕಾಂಗ್ರೆಸ್ ನಾಯಕರು ಇನ್ನೆಷ್ಟು ಹೆದರಿರಬೇಡ ಎಂದರು.
ಸಾರ್ವಕರ್ ರಂತಹ ದೇಶ ಭಕ್ತ ಕಾಂಗ್ರೆಸ್ ಪಕ್ಷದಲ್ಲಿ ಇಲ್ಲ. ನಾಡು-ನುಡಿ ಬಗ್ಗೆ ಈಗ ಮಾತನಾಡುತ್ತಿದ್ದಾರೆ. ಸಾವರ್ಕರ್ ನಾಮಕರಣದ ವಿಚಾರದಲ್ಲಿ ರಾಜಕೀಯ ಬೇಳೆ ಬೇಯಿಸಿಕೊಳ್ಳುವುದು ಬೇಡ. ಬೆಂಗಳೂರು ಮಹಾನಗರ ಪಾಲಿಕೆಯಿಂದ ಅಧಿಕೃತವಾಗಿ ಪರವಾನಗಿ ಪಡೆದು ಫ್ಲೈಓವರಿಗೆ ಸಾವರ್ಕರ್ ಹೆಸರು ನಾಮಕರಣ ಮಾಡುತ್ತೇವೆ. ಈ ವಿಚಾರದಲ್ಲಿ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲವೆಂದು ಸ್ಪಷ್ಟ ನಿಲುವನ್ನು ಸ್ಪಷ್ಟಪಡಿಸಿದರು.
ಬೆಳಗಾವಿ, ಕಲಬುರಗಿ, ವಿಜಯಪುರ ಜಿಲ್ಲೆಗಳ ಹೆಸರು ಬಿಜೆಪಿ ಅಧಿಕಾರ ಅವಧಿಯಲ್ಲಿ ಮರುನಾಮಕರಣಗೊಂಡಿದ್ದು, ಇಂದಿರಾ ಕ್ಯಾಂಟೀನ್‍ಗೆ ಅಕ್ಕಮಹಾದೇವಿ ಹೆಸರು ಸೂಚಿಸಿದ್ದೇವು. ಆದರೆ ಸಿದ್ದರಾಮಯ್ಯ ಅರು ಹಠಕ್ಕೆ ಬಿದ್ದವರಂತೆ ಇಂದಿರಾ ಅವರ ಹೆಸರು ನಾಮಕರಣ ಮಾಡಿದರು. ಆದರೂ ನಾವು ವಿರೋಧ ಮಾಡಿರಲಿಲ್ಲ. ಆದರೆ ಈಗ ಕಾಂಗ್ರೆಸ್ ಹಾಗೂ ಜೆಡಿಎಸ್ ವಿನಾಕಾರಣ ವಿವಾದ ಎಬ್ಬಿಸುತ್ತಿದ್ದಾರೆ. ಸ್ವಾತಂತ್ರ ವೀರನಿಗೆ ವಿರೋಧ ಪಕ್ಷಗಳು ಅಪಮಾನ ಮಾಡುತ್ತಿದ್ದಾರೆ ಎಂದರು.
ಸಾರ್ವಕರ್ ಮುಂದಾಳತ್ವ ಹೋರಾಟ ಕಾಂಗ್ರೆಸ್ ಪೂರ್ವಜರಿಗೆ ಇರಲಿಲ್ಲ. ಸಾವರ್ಕರ್ ಹೆಸರು ಇಟ್ಟ ತಕ್ಷಣ ಸಿದ್ದರಾಮಯ್ಯ ನವರಿಗೆ ಚೇಳು ಕಡಿದಂತಾಗುತ್ತದೆ. ಹೋರಾಟಗಾರರನ್ನು ಅಪಮಾನ ಮಾಡುವ ನೀಚ ಕೆಲಸಕ್ಕೆ ಕಾಂಗ್ರೆಸ್ ಕೈಹಾಕಿದೆ. ಸಾವರ್ಕರ್ ವಿಚಾರಕ್ಕೆ ಬಂದರೆ ತಕ್ಕ ಪಾಠ ಕಲಿಸುತ್ತೇವೆ. ಯಲಹಂಕ ಮೇಲ್ಸೇತುವೆಗೆ ಸಾವರ್ಕರ್ ಹೆಸರು ಇಟ್ಟೇ ಇಡುತ್ತೇವೆ ತಾಖತ್ ಇದ್ದವರು ಎದುರು ಬರಬಹುದು ಎಂದು ಸವಾಲು ಎಸೆದರು.