ಮಂಗಳೂರು: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಇನ್ನು ಮುಂದೆ ಬಾಯಿ ಮುಚ್ಚದಿದ್ರೆ ಕೇಂದ್ರ ನಾಯಕರು ಸೂಕ್ತ ಕ್ರಮ ಕೈಗೊಳ್ಳುವುದು ನಿಶ್ಚಿತ ಎಂದು ಕೇಂದ್ರ ರಸಗೊಬ್ಬರ ಖಾತೆ ಸಚಿವ ಡಿ.ವಿ.ಸದಾನಂದ ಗೌಡ ಎಚ್ಚರಿಸಿದ್ದಾರೆ.
ಪುತ್ತೂರಿನಲ್ಲಿ ಜನಸೇವಕ ಸಮಾವೇಶದಲ್ಲಿ ಭಾಗವಹಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿ, ನಾನು ಪಕ್ಷದ ರಾಜ್ಯಾಧ್ಯಕ್ಷನಾಗಿದ್ದ ಸಂದರ್ಭದಲ್ಲೂ ಯತ್ನಾಳ್ ಇದೇ ರೀತಿ ಹೇಳಿಕೆ ನೀಡುತ್ತಿದ್ದರು. ಹಲವು ಎಚ್ಚರಿಕೆಯ ಬಳಿಕವೂ ಅವರು ತಮ್ಮ ವರ್ತನೆ ಸರಿಪಡಿಸಿಕೊಳ್ಳದ ಕಾರಣ ನಾನೇ ಅವರನ್ನು 6 ವರ್ಷ ಪಕ್ಷದಿಂದ ಉಚ್ಛಾಟಿಸಿದ್ದೆ. ಇದೀಗ ಮತ್ತೆ ಅವರು ಅಂಥದ್ದೇ ವರ್ತನೆ ತೋರುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
Advertisement
Advertisement
ವೈಯಕ್ತಿವಾಗಿ ಯತ್ನಾಳ್ ಬಗ್ಗೆ ದ್ವೇಷವಿಲ್ಲ. ಆದರೆ ಅವರ ನಡವಳಿಗೆ ಬಗ್ಗೆ ಹೇಳುತ್ತೇನೆ. ಸಚಿವ ಸ್ಥಾನಕ್ಕಾಗಿ ಅವರು ಈ ರೀತಿ ಮಾತನಾಡುತ್ತಿದ್ದಾರೆ. ಅಲ್ಲದೆ ಅವರನ್ನು ಕರೆದು ಮಾತನಾಡಬೇಕೆಂದು ಈ ರೀತಿ ವರ್ತಿಸುತ್ತಿದ್ದಾರೆ. ಅವರನ್ನು ಸಮಾಧಾನ ಮಾಡುವ ಪ್ರಶ್ನೆಯೇ ಇಲ್ಲ. ಇನ್ನೊಮ್ಮೆ ಯತ್ನಾಳ್ ಮಾತನಾಡಿದರೆ ಕೇಂದ್ರ ನಾಯಕರು ಕ್ರಮ ಕೈಗೊಳ್ಳುತ್ತಾರೆ ಎಂದರು.
Advertisement
Advertisement
ಪಕ್ಷದ ವಿರುದ್ಧ, ಪಕ್ಷದ ನಾಯಕರ ವಿರುದ್ಧ ಬೀದಿ ಬದಿಯಲ್ಲಿ ಮಾತನಾಡುತ್ತಿದ್ದಾರೆ. ಸಚಿವ ಸ್ಥಾನಕ್ಕಾಗಿ ಯತ್ನಾಳ್ ಈ ರೀತಿಯ ಕೆಲಸಗಳನ್ನು ಮಾಡುತ್ತಿದ್ದಾರೆ ಎನ್ನುವುದು ನಾಯಕರ ಗಮನಕ್ಕೆ ಬಂದಿದೆ. ಪಕ್ಷಕ್ಕೆ, ಪಕ್ಷದ ನಾಯಕರಿಗೆ ಸಲಹೆ ಕೊಡುವ ಕೆಲಸವನ್ನು ಯತ್ನಾಳ್ ನಿಲ್ಲಿಸಬೇಕು. ಯತ್ನಾಳ್ ಸಲಹೆ ಅಗತ್ಯವಿಲ್ಲ, ಬೇಕಿದ್ದರೆ ಅವರು ಬೇರೆ ದಾರಿಯನ್ನು ಸಹ ನೋಡಿಕೊಳ್ಳಬಹುದು ಎಂದರು.
ವಾಜಪೇಯಿ ಸರ್ಕಾರದಲ್ಲಿ ರಾಜ್ಯ ಖಾತೆ ಸಚಿವರಾಗಿದ್ದ ಯತ್ನಾಳ್ ಈ ರೀತಿ ನಡೆದುಕೊಳ್ಳುವುದು ಸರಿಯಲ್ಲ. ಇದೇ ರೀತಿಯ ವರ್ತನೆಯನ್ನು ಮುಂದುವರಿಸಿದಲ್ಲಿ ಕೇಂದ್ರ ನಾಯಕರು ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುತ್ತಾರೆ. ಶಾಸಕರಾಗಿ ಕ್ಷೇತ್ರದ ಜನರ ಕೆಲಸ ಮಾಡಿ, ಪಕ್ಷದಲ್ಲಿ ಅಸಮಾಧಾನವಿದ್ದಲ್ಲಿ ಅದನ್ನು ಕೇಂದ್ರ ನಾಯಕರ ಗಮನಕ್ಕೆ ತನ್ನಿ. ರಾಜ್ಯದ ಕೆಲವು ನಾಯಕರು ದೆಹಲಿಗೆ ತೆರಳಿ ಕೇಂದ್ರ ನಾಯಕರನ್ನು ಭೇಟಿಯಾಗುವುದರಲ್ಲಿ ಯಾವುದೇ ತಪ್ಪಿಲ್ಲ. ಅದನ್ನು ಬಿಟ್ಟು ಬೀದಿಯಲ್ಲಿ ಮಾತನಾಡುವುದನ್ನು ಪಕ್ಷ ಸಹಿಸುವುದಿಲ್ಲ ಎಂದು ಕಿಡಿಕಾರಿದರು.