ಉಡುಪಿ: ಬಿಜೆಪಿಯವರು ಮುಖ್ಯಮಂತ್ರಿ ಬಿ. ಎಸ್ ಯಡಿಯೂರಪ್ಪನವರನ್ನು ಶರಶಯ್ಯೆ ಮೇಲೆ ಮಲಗಿಸಿದ್ದಾರೆ. ಉಪ ಚುನಾವಣೆಯ ನಂತರ ಅವರನ್ನು ಕಳುಹಿಸಿಕೊಡುತ್ತಾರೆ ಎಂದು ವಿಧಾನಪರಿಷತ್ ಸದಸ್ಯ ಬಿಕೆ ಹರಿಪ್ರಸಾದ್ ಹೇಳಿದ್ದಾರೆ.
ಉಡುಪಿ ಕಾಂಗ್ರೆಸ್ ಭವನಕ್ಕೆ ಭೇಟಿ ನೀಡಿದ ಅವರು ಮಾಧ್ಯಮಗಳ ಜೊತೆ ಮಾತನಾಡಿದರು, ತುಮಕೂರು ಜಿಲ್ಲೆ ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಗೆ ಅಭ್ಯರ್ಥಿಗಳೇ ಇರಲಿಲ್ಲ. ಕಾಂಗ್ರೆಸ್‍ಗೆ ಅಪ್ಲಿಕೇಶನ್ ಕೊಟ್ಟಿದ್ದ ವ್ಯಕ್ತಿಯನ್ನು ಬಿಜೆಪಿಯವರು ಕರೆದುಕೊಂಡು ಹೋಗಿ ಟಿಕೆಟ್ ಕೊಟ್ಟಿದ್ದಾರೆ. ಬಿಜೆಪಿಯವರಿಗೆ ಅಲ್ಲಿ ಅಭ್ಯರ್ಥಿಯೇ ಇಲ್ಲ. ಅಲ್ಲಿ ನಾವು ಚುನಾವಣೆಯನ್ನು ಗೆಲ್ಲುತ್ತೇವೆ. ಕಾಂಗ್ರೆಸ್ಸಿನಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎಂದರು.
ರಾಷ್ಟ್ರೀಯ ಪಕ್ಷ ಎಂದಾದ ಮೇಲೆ ಕೆಲವು ಅಭಿಪ್ರಾಯ ಭೇದಗಳು ಇರುತ್ತದೆ. ಅದನ್ನೆಲ್ಲ ಸರಿಮಾಡಿಕೊಂಡು ನಾವು ಈ ಬಾರಿ ಚುನಾವಣೆಯನ್ನು ಎದುರಿಸುತ್ತೇವೆ. ಚುನಾವಣೆಯನ್ನು ಗೆಲ್ಲುತ್ತೇವೆ ಎಂದರು. ಯಡಿಯೂರಪ್ಪ ಇಚ್ಛಾಮರಣಿ ಅವರು ಯಾವಾಗ ಬೇಕಾದರೂ ಅಧಿಕಾರದಿಂದ ಹೋಗಬಹುದು. ಉಪ ಚುನಾವಣೆಯ ನಂತರ ಬಿಜೆಪಿಯವರೇ ಅವರನ್ನು ಅಧಿಕಾರದಿಂದ ಕೆಳಗಿಳಿಸುತ್ತಾರೆ ಎಂದು ಭವಿಷ್ಯ ನುಡಿದರು.