ಹಾಸನ: ಸಿಎಂ ಯಡಿಯೂರಪ್ಪ ಅವರ ಮುಖ ನೋಡಿ ನಮಗೂ ಸಾಕಾಗಿದೆ. ಯಾವ ಟಿವಿ ನೋಡಿದರೂ ಮೋದಿ, ಯಡಿಯೂರಪ್ಪ ಅವರೇ ಬರುತ್ತಾರೆ ಎಂದು ಹಾಸನದಲ್ಲಿ ಮಾಜಿ ಸಚಿವ ರೇವಣ್ಣ ವ್ಯಂಗ್ಯವಾಡಿದ್ದಾರೆ.
ಇಂದು ನಗರದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ನಮ್ಮ ಜಿಲ್ಲೆ ಹಾಸನವನ್ನು ಮೊದಲಿನಿಂದ ಗ್ರೀನ್‍ಜೋನ್ ಆಗಿ ಕಾಪಾಡಿಕೊಂಡು ಬಂದಿದ್ದೇವೆ. ಇದರಲ್ಲಿ ನಮ್ಮ ಜಿಲ್ಲೆಯ ಅಧಿಕಾರಿಗಳ ಶ್ರಮ ಇದೆ. ಆದರೆ ರಾಜ್ಯ ಸರ್ಕಾರ ಮುಂಬೈನಿಂದ ಬಂದವರನ್ನು ಚೆಕ್ ಮಾಡಿಸದೇ ಕರೆತಂದಿದ್ದರಿಂದ ಇಂದು ನಮ್ಮ ಜಿಲ್ಲೆಯಲ್ಲಿ ಕೊರೊನಾ ಹೆಚ್ಚಾಗಿದೆ. ಪ್ರತಿ ದಿನ ಯಡಿಯೂರಪ್ಪ ಮೊದಲ ಪೇಜ್ ಜಾಹೀರಾತಿಗೆ ಹಣ ಖರ್ಚು ಮಾಡುವ ಬದಲು, ಬೇರೆ ಕಾರ್ಯಗಳಿಗೆ ಹಣ ವಿನಿಯೋಗಿಸಲಿ ಎಂದು ವ್ಯಂಗ್ಯವಾಡಿದರು.
Advertisement
Advertisement
ಇದೇ ವೇಳೆ ಮುಂಬೈಯಿಂದ ಹಾಸನಕ್ಕೆ ಬರುವವರಿಗೆ ಸರ್ಕಾರ ಅನುಮತಿ ನೀಡಿದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಹೆಚ್‍ಡಿ ರೇವಣ್ಣ, ಮುಂಬೈನಿಂದ ಹಾಸನಕ್ಕೆ ಬರಲಿ ಬೇಡ ಎನ್ನುವುದಿಲ್ಲ. ಆದರೆ ಅವರು ಕೊರೊನಾ ಟೆಸ್ಟ್ ಮಾಡಿಸಿಕೊಂಡು, ಚಿಕಿತ್ಸೆ ಪಡೆದುಕೊಂಡು ಬರಲಿ ಎಂದರು. ಇದೇ ವೇಳೆ ಕೊರೊನಾ ಪ್ರಕರಣದ ಬಗ್ಗೆ ಮಾತನಾಡಿದ ರೇವಣ್ಣ, ಇಂದು 13 ಹೊಸ ಪ್ರಕರಣಗಳು ಬರುತ್ತಂತೆ. ಅದರಲ್ಲಿ ಮೂವರು ಸೀರಿಯಸ್ಸ್ ಅಂತೆ ಎಂದು ಮಾಹಿತಿ ನೀಡಿದರು.
Advertisement
Advertisement
ಬುಧವಾರವಷ್ಟೇ ಹಾಸನದಲ್ಲಿ 21 ಕೊರೊನಾ ಪ್ರಕರಣಗಳು ಕಂಡುಬಂದಿದ್ದು, ಜೊತೆಗೆ ಇಂದು 13 ಪ್ರಕರಣಗಳು ಬಂದಿದೆ. ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 66ಕ್ಕೇರಿದೆ. ಚನ್ನರಾಯಪಟ್ಟಣ ತಾಲೂಕಿನಲ್ಲಿ ಹೆಚ್ಚು ಕೊರೊನಾ ಪ್ರಕರಣಗಳು ಕಂಡು ಬಂದಿದ್ದು, ಮುಂಬೈನಿಂದ ವಾಪಸ್ ಬಂದವರಲ್ಲೇ ಹೆಚ್ಚು ಕೊರೊನಾ ಕಾಣಿಸಿಕೊಳ್ಳುತ್ತಿದೆ. ಆದರೆ ಅವರೆಲ್ಲರನ್ನೂ ಕ್ವಾರಂಟೈನ್ ಅಲ್ಲಿ ಇಟ್ಟಿರುವುದು ಜಿಲ್ಲೆಯ ಜನರ ಆತಂಕ ಕಡಿಮೆ ಮಾಡಿದೆ.