ಧಾರವಾಡ: ಯಡಿಯೂರಪ್ಪನವರು ಹೈಕಮಾಂಡ್ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೇಳಿದರೆ ನೀಡುತ್ತೇನೆ ಎಂದು ಅವರೇ ಹೇಳಿಕೊಂಡಿದ್ದಾರೆ. ಪಕ್ಷ ಇಷ್ಟು ದಿನ ಅವಕಾಶ ಮಾಡಿ ಕೊಟ್ಟಿದೆ. ಅದನ್ನು ಅವರು ತಿಳಿದುಕೊಂಡು ನ್ಯಾಯವಾಗಿ ಜನಪ್ರತಿನಿಧಿಯಾಗಿ ನಡೆದುಕೊಳ್ಳಬೇಕು. ಅವರಿಗೆ ಆತ್ಮವಂಚನೆಯಾಗಿದೆ ಎಂಬಂತೆ ನನಗೆ ಅನಿಸುತ್ತಿದೆ ಎಂದು ಮಾಜಿ ಶಾಸಕ ಚಂದ್ರಕಾಂತ್ ಬೆಲ್ಲದ್ ಹೇಳಿಕೆ ನೀಡಿದ್ದಾರೆ.
ಧಾರವಾಡದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಚಂದ್ರಕಾಂತ್ ಬೆಲ್ಲದ್, ರಾಜೀನಾಮೆ ಕೊಡುವುದು, ಬಿಡುವುದು ಅದು ಅವರಿಗೆ ಬಿಟ್ಟ ವಿಚಾರ, ನ್ಯಾಯಯುತವಾಗಿ ನಡೆದುಕೊಳ್ಳುವುದು ಅವರ ಧರ್ಮ. ನನಗೆ ಆತ್ಮವಂಚನೆಯಾದರೆ ನಾನು ನಿರ್ಣಯ ತೆಗೆದುಕೊಳ್ಳಬೇಕು. ಯಡಿಯೂರಪ್ಪನವರಿಗೆ ಆತ್ಮವಂಚನೆಯಾಗಿದೆ ಎಂದು ನನಗೆ ಅನಿಸುತ್ತಿದೆ ಹಾಗಾಗಿ ಅವರು ರಾಜೀನಾಮೆ ಬಗ್ಗೆ ಮಾತನಾಡಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಇದನ್ನೂ ಓದಿ: ಸಿಎಂ ವಿರುದ್ಧ ಸಿಪಿವೈ, ಬೆಲ್ಲದ್, ಯತ್ನಾಳ್ ಚಾರ್ಜ್‍ಶೀಟ್ ಏನು?
ನಾನು ಸಚಿವನಾಗಬೇಕು ಎಂದು ರಾಜಕೀಯಕ್ಕೆ ಬಂದಿರಲಿಲ್ಲ, ಆದರೆ ನನ್ನನ್ನು ಸಚಿವನಾಗಿ ಮಾಡಬೇಕಾಗಿದ್ದು ಯಡಿಯೂರಪ್ಪನವರ ಕರ್ತವ್ಯವಾಗಿತ್ತು. ಅದನ್ನು ಅವರು ಮಾಡಲಿಲ್ಲ, ಸದ್ಯ ನಾನು ರಾಜಕೀಯ ಬಿಟ್ಟಿದ್ದೇನೆ. ಈಗ ನನ್ನ ಮಗ ರಾಜಕೀಯ ಪ್ರವೇಶ ಮಾಡಿದ್ದಾನೆ. ಜನ ಅವನನ್ನು ಆಯ್ಕೆ ಮಾಡಿ ಕರೆತಂದಿದ್ದಾರೆ. ರಾಜ್ಯದ ಜನರಿಗೆ ಅವನ ಬಗ್ಗೆ ಸಾಕಷ್ಟು ಗೊತ್ತಿದೆ, ರಾಷ್ಟ್ರದಲ್ಲೂ ಗೊತ್ತಿದೆ. ಅರವಿಂದ ಬೆಲ್ಲದ್ ನನಗೆ ಒಬ್ಬ ಒಳ್ಳೆಯ ಮಗ ಎಂದು ಅಭಿಪ್ರಾಯಪಟ್ಟರು.