ಹಾಸನ: ಮ್ಯಾಟ್ರಿಮೋನಿ ಮೂಲಕ ಪರಿಚಯ ಮಾಡಿಕೊಂಡು ಆರು ಲಕ್ಷ ಮೋಸ ಮಾಡಿದ್ದ ಚಾಲಾಕಿ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಲಕ್ಷ್ಮಿ (32) ಮತ್ತು ಆಕೆಗೆ ಸಹಾಯ ಮಾಡಿದ್ದ ಶಿವಣ್ಣ ಎಂದು ಗುರುತಿಸಲಾಗಿದೆ. ಆರೋಪಿ ಲಕ್ಷ್ಮಿ ಚಿಕ್ಕಬಳ್ಳಾಪುರ ಮೂಲದವಳಾಗಿದ್ದು, ಶಿವಣ್ಣ ಕೋಲಾರ ಮೂಲದವನು ಎಂದು ತಿಳಿದುಬಂದಿದೆ. ಹಾಸನದ 40 ವರ್ಷದ ಅವಿವಾಹಿತ ಪರಮೇಶ್ ದೂರಿನ ಮೇರೆಗೆ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
ಆರೋಪಿ ಲಕ್ಷ್ಮಿ ಮ್ಯಾಟ್ರಿಮೋನಿ ಮೂಲಕ ಪರಮೇಶ್‍ನನ್ನು ಪರಿಚಯ ಮಾಡಿಕೊಂಡಿದ್ದಳು. ನಾನು ಅನಾಥೆ, ಚಿಕ್ಕಮನ ಮನೆಯಲ್ಲಿ ವಾಸ ಮಾಡುತ್ತಿದ್ದೇನೆ. ನಾನು ಐಟಿಯಲ್ಲಿ ಉದ್ಯೋಗಿ ಎಂದು ಪರಿಚಯ ಮಾಡಿಕೊಂಡಿದ್ದಳು. ನಂತರ ಡಿಸೆಂಬರ್ 2019 ರಿಂದ 2020ರ ತನಕ ಸುಮಾರು ಆರು ಲಕ್ಷ ರೂಪಾಯಿಯನ್ನು ತನ್ನ ಖಾತೆಗೆ ಜಮಾ ಮಾಡಿಸಿಕೊಂಡಿದ್ದಳು.
ಹಣ ಬಂದ ಕೂಡಲೇ ನನಗೆ ಕಾಲ್ ಮಾಡಿದರೆ ಅತ್ಯಾಚಾರ ಕೇಸ್ ಹಾಕುತ್ತೇನೆ ಎಂದು ಲಕ್ಷ್ಮಿ ಬೆದರಿಕೆ ಹಾಕಿದ್ದಳು. ಆರೋಪಿ ಶಿವಣ್ಣನ ಸಹಾಯ ಪಡೆದು ಜನರಿಗೆ ಮೋಸ ಮಾಡುತ್ತಿದ್ದಳು. ಕೊನೆಗೆ ಪರಮೇಶ್ ಈ ಕುರಿತು ಪೊಲೀಸರಿಗೆ ದೂರು ನೀಡಿದ್ದರು. ಅಂತಿಮವಾಗಿ ಹಾಸನ ಪೊಲೀಸರು ಬೀಸಿದ್ದ ಬಲೆಗೆ ಶಿವಣ್ಣ ಮತ್ತು ಲಕ್ಷ್ಮಿ ಬಿದ್ದಿದ್ದಾರೆ.
ಈ ಕುರಿತು ಹಾಸನ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.