ಚೆನ್ನೈ: ಇಂಗ್ಲೆಂಡ್ ಆಟಗಾರ ಮೋಯಿನ್ ಅಲಿ ಅವರಿಂದ ಜೆರ್ಸಿಗೆ ಸಂಬಂಧಿಸಿದಂತೆ ಯಾವುದೇ ವಿಶೇಷ ಮನವಿ ಬಂದಿಲ್ಲ ಎಂದು ಚೆನ್ನೈ ಸೂಪರ್ ಕಿಂಗ್ಸ್ ತಂಡ ಹೇಳಿದೆ.
ಈ ಬಾರಿಯ ಸಿಎಸ್‍ಕೆ ತಂಡದ ಜೆರ್ಸಿಯಲ್ಲಿ ಬೀರ್ ಬ್ರ್ಯಾಂಡ್ ಎಸ್‍ಎನ್‍ಜೆ 10000ದ ಲೋಗೋ ಇರಲಿದೆ. ಧರ್ಮದ ಕಾರಣ ನೀಡಿ ಎಸ್‍ಎನ್‍ಜೆ ಡಿಸ್ಟಿಲರೀಸ್ ಕಂಪನಿಯ ಬೀರ್ ಬ್ರ್ಯಾಂಡ್ ಜೆರ್ಸಿಯನ್ನು ಧರಿಸುವುದಕ್ಕೆ ಮೋಯಿನ್ ಅಲಿ ಆಕ್ಷೇಪ ವ್ಯಕ್ತಪಡಿಸಿದ್ದರು ಎಂದು ವರದಿಯಾಗಿತ್ತು.
ಅಷ್ಟೇ ಅಲ್ಲದೇ ಅಲಿ ಅವರ ಈ ವಿಶೇಷ ಮನವಿಯನ್ನು ಸಿಎಸ್‍ಕೆ ತಂಡ ಪುರಸ್ಕರಿಸಿತ್ತು ಎಂದು ವರದಿಯಾಗಿತ್ತು. ಈ ವರದಿಗೆ ಸಂಬಂಧಿಸಿ ಸಿಎಸ್‍ಕೆ ಮ್ಯಾನೇಜ್‍ಮೆಂಟ್ ಪ್ರತಿಕ್ರಿಯಿಸಿ ಮೊಯಿನ್ ಅಲಿ ಅವರಿಂದ ಈ ರೀತಿಯ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಹೇಳಿದೆ.
ಸಿಎಸ್‍ಕೆ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕಾಸಿ ವಿಶ್ವನಾಥನ್ ಪ್ರತಿಕ್ರಿಯಿಸಿ, ಯಾವುದೇ ಲೋಗೋವನ್ನು ತೆಗೆಯುವಂತೆ ಮೊಯಿನ್ ಅಲಿ ಅವರಿಂದ ಯಾವುದೇ ಮನವಿ ಬಂದಿಲ್ಲ ಎಂದು ತಿಳಿಸಿದ್ದಾರೆ.
ಕಳೆದ ವರ್ಷ ಅಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಆಡಿದ್ದರು. ಆದರೆ ಈ ಬಾರಿ ಆರ್‍ಸಿಬಿ ಅವರನ್ನು ಕೈ ಬಿಟ್ಟ ಹಿನ್ನೆಲೆಯಲ್ಲಿ ಚೆನ್ನೈ ತಂಡ 7 ಕೋಟಿ ರೂ. ಬಿಡ್ ಮಾಡಿ ಮಿನಿ ಹರಾಜಿನಲ್ಲಿ ಖರೀದಿಸಿತ್ತು.
ಬರ್ಮಿಂಗ್‍ಹ್ಯಾಮ್‍ನಲ್ಲಿ ಜನಿಸಿದ ಅಲಿ ಒಟ್ಟು 19 ಐಪಿಎಲ್ ಪಂದ್ಯಗಳಿಂದ 20.6 ಸರಾಸರಿಯಲ್ಲಿ 309 ರನ್ ಗಳಿಸಿದ್ದಾರೆ. ಕಳೆದ ಆವೃತ್ತಿಯಲ್ಲಿ ಒಟ್ಟು 3 ಪಂದ್ಯಗಳನ್ನು ಆಡಿದ್ದರು.
2010ರ ಆವೃತ್ತಿಯಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ಆಲ್‍ರೌಂಡರ್ ಯೂಸೂಫ್ ಪಠಾಣ್ ಅವರು ಕಿಂಗ್‍ಫಿಶರ್ ಲೋಗೋಗೆ ಟೇಪ್ ಸುತ್ತಿದ ಜೆರ್ಸಿ ಧರಿಸಿ ಆಡಿದ್ದರು.