– ಸದನದಲ್ಲೇ ಯತ್ನಾಳ್‍ಗೆ ‘ರಾಜಾಹುಲಿ’ ಟಾಂಗ್
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಹಾಗೂ ರಾಜ್ಯದ ಜನತೆಯ ಆಶೀರ್ವಾದ ಇರೋವರೆಗೆ ನನ್ನನು ಸಿಎಂ ಸ್ಥಾನದಿಂದ ಕೆಳಗಿಳಿಸಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹೇಳಿದ್ದಾರೆ.
ವಿಧಾನಸಭಾ ಕಲಾಪದಲ್ಲಿ ಮಾತನಾಡಿದ ಸಿಎಂ, ಕಳೆದ 6 ತಿಂಗಳಿನಿಂದ ನನ್ನನ್ನು ಸಿಎಂ ಸ್ಥಾನದಿಂದ ಕೆಳಗೆ ಇಳಿಸುತ್ತಾರೆ ಅಂತ ಬೆಳಗ್ಗೆ ಎದ್ದಾಗಿನಿಂದ ಹೇಳ್ತಿದ್ದೀರಿ. ಆದರೆ ಎಲ್ಲಿವರೆಗೆ ಪ್ರಧಾನಿ ಮೋದಿ ಹಾಗೂ ಗೃಹ ಸಚಿವರ ಶಾ ಅವರ ಬೆಂಬಲ ಹಾಗೂ ರಾಜ್ಯದ ಜನರ ಆಶೀರ್ವಾದ ಇದೆಯೋ ಅಲ್ಲಿಯವರೆಗೆ ನನ್ನನ್ನು ಸಿಎಂ ಸ್ಥಾನದಿಂದ ಕೆಳಗೆ ಇಳಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.
ಈ ಇಬ್ಬರು ಇರುವವರೆಗೆ ನನ್ನ ಮೇಲೆ 100 ಕೇಸ್ ಹಾಕಿದರು ಕೂಡ ನಾನು ಹೆದರಲ್ಲ. ನಾನು ಪ್ರಾಮಾಣಿಕ ಅನ್ನೋದನ್ನ ಸಾಬೀತು ಮಾಡ್ತೀನಿ. ದಾರಿಯಲ್ಲಿ ಹೋಗುವವರೆಲ್ಲ ಆರ್‍ಟಿಐ ನಲ್ಲಿ ಅರ್ಜಿ ಹಾಕಿ ಕೇಸ್ ಹಾಕ್ತಾರೆ. ನಾವು ಮನಸ್ಸು ಮಾಡಿದರೆ ಎಷ್ಟು ಕೇಸ್ ಬೇಕಾದರು ಹಾಕಬಹುದು. ಆದರೆ ನಾವು ಹಾಗೆ ಮಾಡಲ್ಲ. ಮುಂದಿನ ಚುನಾವಣೆಯಲ್ಲಿ ಬಿಜೆಪಿಯನ್ನ 150 ಸ್ಥಾನಗಳಲ್ಲಿ ಗೆಲ್ಲಿಸಿ ನಿಮ್ಮನ್ನ ವಿರೋಧ ಪಕ್ಷದಲ್ಲಿ ಕೂರಿಸುತ್ತೇನೆ ಎಂದು ಕಾಂಗ್ರೆಸ್ ವಿರುದ್ಧ ಸಿಎಂ ಕಿಡಿಕಾರಿದರು.
ದೇವರ ದಯೆಯಿಂದ ಮುಂದೆ ಒಳ್ಳೆ ಕಾಲ ಬರುತ್ತೆ. ಎಲ್ಲರು ಸೇರಿ ರಾಜ್ಯದ ಅಭಿವೃದ್ಧಿ ಮಾಡಲು ಶ್ರಮ ವಹಿಸೋಣ. ಬರುವಂತ ದಿನಗಳಲ್ಲಿ ತೆರಿಗೆ ಸುಧಾರಣೆ ಕಾಣಲಿದೆ. ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ಬಿಡುಗಡೆಗೆ ಕ್ರಮ ಕೈಗೊಳ್ಳುವುದಾಗಿ ಸಿಎಂ ಭರವಸೆ ನೀಡಿದರು.
ಇತ್ತ ಸಿಎಂ ಮಾತು ಮುಗಿಯುತ್ತಿದ್ದಂತೆ ಎದ್ದು ನಿಂತ ಯತ್ನಾಳ್, ಸಿಎಂ ವಿರುದ್ಧ ಮಾತನಾಡಲು ಆರಂಭಿಸಿದರು. ಸಿಎಂ ಅವರು ಹೋರಾಟಗಳ ಬಗ್ಗೆ ಹೇಳಿಕೆ ಕೊಡಲಿ. ನಮಗೂ ಮಾತಾಡೋಕೆ ಅವಕಾಶ ಕೊಡಿ. ಪಂಚಮಸಾಲಿ, ಹಾಲುಮತ ಸಮಾಜದ ಬಗ್ಗೆ ಏನ್ ಮಾಡ್ತೀರಿ. ಮಾತಾಡೋಕೆ ಅವಕಾಶ ನೀಡಲ್ಲ, ಆಮೇಲೆ ಸಭೆ ಮುಂದೂಡಿಕೆ ಮಾಡ್ತೀರಾ ಎಂದು ಯತ್ನಾಳ್ ಗರಂ ಆದರು. ಈ ವೇಳೆ ಸಿಎಂ, ನಮ್ಮದು ರಾಷ್ಟ್ರೀಯ ಪಕ್ಷ. ಹೈಕಮಾಂಡ್ ಜೊತೆ ಮಾತನಾಡಿ ತೀರ್ಮಾನ ಮಾಡಬೇಕು. 25 ಜನ ಸಂಸದರನ್ನ ಕರೆದುಕೊಂಡು ಹೋಗಿ ಕೇಂದ್ರ ನಾಯಕರ ಜೊತೆ ನೀವು ಮಾತಾಡಿ ಎಂದು ಯತ್ನಾಳ್‍ಗೆ ತಿರುಗೇಟು ನೀಡಿದರು.