ಬೆಂಗಳೂರು: ಮೋಡ ಸೂರ್ಯನನ್ನು ಮರೆ ಮಾಚಲು ಆಗಲ್ಲ. ಒಂದು ವೇಳೆ ಮರೆ ಮಾಚಿದ್ರೂ ಎಷ್ಟು ಕಾಲ? ಎಂದು ಪ್ರಶ್ನಿಸುವ ಹೇಳಿಕೆಯೊಂದನ್ನು ರಾಷ್ಟ್ರೀಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರು ಹೇಳಿದ್ದಾರೆ. ಇದನ್ನೂ ಓದಿ: ಶಾಸಕ ಜಮೀರ್ಗೆ AICC ವಾರ್ನಿಂಗ್
ರಾಜ್ಯ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಮೋಡ ಸೂರ್ಯನನ್ನು ಮರೆ ಮಾಚಲು ಆಗಲ್ಲ. ಒಂದು ವೇಳೆ ಮರೆ ಮಾಚಿದ್ರೂ ಎಷ್ಟು ಕಾಲ? ನಮಗೆ ಯಾವ ಅಸಮಾಧಾನವೂ ಇಲ್ಲ. ಪಾರ್ಟಿ ಬೆಳವಣಿಗೆ ಹೊರತುಪಡಿಸಿ ಬೇರೇನೂ ಯೋಚನೆ ಮಾಡಿಲ್ಲ ಅಂತಾ ಸ್ಪಷ್ಟಪಡಿಸಿದ್ದಾರೆ.
ವೈಯಕ್ತಿಕವಾಗಿ ಬೆಳೆಯಲು ಪಾರ್ಟಿಯನ್ನು ತುಳಿಯಬೇಕು ಅಂತಾ ಯಾವತ್ತೂ ಯೋಚನೆ ಮಾಡಿಲ್ಲ. ಪಕ್ಷದ ಬೆಳವಣಿಗೆ ಜೊತೆಗೆ ನಾವೂ ಬೆಳೆಯಬೇಕು ಅಂತಾ ಆಸೆಪಟ್ಟಿದ್ದೇವೆ, ಹಾಗೆಯೇ ಬೆಳೆದಿದ್ದೇವೆ. ಪಾರ್ಟಿಯ ಜೊತೆಗೆ ಬೆಳೆಯಬೇಕು ಅಂತಾ ಆಸೆಪಡುತ್ತೇವೆಯೇ ಹೊರತು ಪಾರ್ಟಿಯನ್ನು ಮುಗಿಸಿ ಅಲ್ಲ ಅಂತಾ ಪಕ್ಷದೊಳಗಿನ ಒಂದು ಗುಂಪಿಗೆ ಪರೋಕ್ಷ ಟಾಂಗ್ ಕೊಟ್ಟಿದ್ದಾರೆ.
ಮೋಡ ಸೂರ್ಯನನ್ನು ಮರೆ ಮಾಚಿದರೂ ಎಷ್ಟು ಕಾಲ? ಕೆಲವು ಕಾಲ ಮಾತ್ರ ಸಾಧ್ಯ. ನಾನು ಹೇಳಿದ್ದನ್ನು ಅವರವರು ಹೇಗೆ ಗ್ರಹಿಸುಯತ್ತಾರೋ ಹಾಗೆಯೇ ಅದರ ಅರ್ಥವಾಗುತ್ತದೆ. ಒಳ್ಳೆಯ ದೃಷ್ಟಿಯಿಂದ ಗ್ರಹಿಸಿದರೆ ಒಳ್ಳೆಯದ್ದಾಗುತ್ತದೆ. ಕೆಟ್ಟ ದೃಷ್ಟಿಯಿಂದ ಗ್ರಹಿಸಿದರೆ ಕೆಟ್ಟದ್ದಾಗಿದೆ. ನನ್ನ ಪ್ರತಿ ಮಾತಿನ ಉದ್ದೇಶ ಸದುದ್ದೇಶದಿಂದ ಕೂಡಿರುತ್ತದೆ ಯಾವುದೇ ದುರುದ್ದೇಶ ಇಲ್ಲ ಎಂದಿದ್ದಾರೆ.
ಇದೇ ವೇಳೆ ಬಹಿರಂಗ ಹೇಳಿಕೆ ನೀಡಿರುವುದರ ವಿರುದ್ಧ ಶಿಸ್ತುಕ್ರಮ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಶಿಸ್ತುಕ್ರಮಕ್ಕೆ ಯಾವುದೇ ಗಡುವು ಹಾಕಿಲ್ಲ, ನೀವೇ ಗಡುವು ಹಾಕಿದ್ದೀರಿ ಅಷ್ಟೇ, ಅದನ್ನು ಚರ್ಚೆ ಮಾಡಿ ಮತ್ತೆ ನಾನು ಶಿಸ್ತಿನ ಉಲ್ಲಂಘನೆ ಮಾಡಬೇಕಾ? ಎಂದು ಹೇಳಿದ್ದಾರೆ.