ಚೆನ್ನೈ: ಮೊಬೈಲ್ ಫೋನ್ ಸ್ಫೋಟದಿಂದ ಸಂಭವಿಸಿದ ಬೆಂಕಿ ಅವಘಡದಿಂದ ತಾಯಿ ಮತ್ತು ಆಕೆಯ ಇಬ್ಬರು ಗಂಡು ಮಕ್ಕಳು ಸಾವನ್ನಪ್ಪಿರುವ ಘಟನೆ ತಮಿಳುನಾಡಿನ ಕರೂರಿನಲ್ಲಿ ನಡೆದಿದೆ.
ಮುತ್ತುಲಕ್ಷ್ಮಿ (29) ಮತ್ತು ಆಕೆಯ ಅವಳಿ ಮಕ್ಕಳು ಸಾವನ್ನಪ್ಪಿದ್ದಾರೆ. ಮುತ್ತುಲಕ್ಷ್ಮಿ ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಆಸ್ಪತ್ರೆಗೆ ಕರೆದುಕೊಂಡು ಹೋಗುವ ಮಾರ್ಗದಲ್ಲಿ ಮಕ್ಕಳು ಮೃತಪಟ್ಟಿದ್ದಾರೆ.
ಏನಿದು ಪ್ರಕರಣ?
ಮುತ್ತುಲಕ್ಷ್ಮಿ ಆರು ವರ್ಷಗಳ ಹಿಂದೆ ಬಾಲಕೃಷ್ಣನ್ ಜೊತೆ ಮದುವೆಯಾಗಿದ್ದಳು. ಈ ದಂಪತಿಗೆ ಮೂರು ವರ್ಷದ ಇಬ್ಬರು ಅವಳಿ ಗಂಡು ಮಕ್ಕಳಿದ್ದರು. ದಂಪತಿ ಕರೂರ್ ಪಟ್ಟಣದ ಬಳಿಯ ರಾಯನೂರಿನಲ್ಲಿರುವ ವಾಸಿಸುತ್ತಿದ್ದು, ರಾಯನೂರು ಬಳಿ ಸಣ್ಣ ಹೋಟೆಲ್ ನಡೆಸುತ್ತಿದ್ದರು. ಆದರೆ ಎರಡುವರೆ ವರ್ಷಗಳ ಹಿಂದೆ ಮುತ್ತುಲಕ್ಷ್ಮಿ ಪತಿಯ ಜೊತೆ ಜಗಳ ಮಾಡಿಕೊಂಡು ಆತನಿಂದ ದೂರವಾಗಿದ್ದಳು.
ಇಬ್ಬರು ಮಕ್ಕಳ ಜೊತೆ ತನ್ನ ಪೋಷಕರೊಂದಿಗೆ ರಾಯನೂರಿನಲ್ಲಿ ವಾಸಿಸುತ್ತಿದ್ದಳು. ಭಾನುವಾರ ರಾತ್ರಿ ಮುತ್ತುಲಕ್ಷ್ಮಿ ತನ್ನ ಮನೆಯ ಸೋಫಾದ ಮೇಲೆ ಮಲಗಿದ್ದು, ತನ್ನ ಫೋನ್ ಚಾರ್ಜ್ ಹಾಕಿದ್ದಳು. ಸೋಮವಾರ ಬೆಳಗ್ಗೆ ಆಕೆಯ ಮನೆಯಿಂದ ಹೊಗೆ ಬರುತ್ತಿರುವುದನ್ನು ಗಮನಿಸಿದ ನೆರೆಹೊರೆಯವರು ಅಗ್ನಿಶಾಮಕ ದಳದವರಿಗೆ ಫೋನ್ ಮಾಡಿ ತಿಳಿಸಿದ್ದಾರೆ.
ಮಾಹಿತಿ ತಿಳಿದು ಸ್ಥಳಕ್ಕೆ ಬಂದು ಅಗ್ನಿಶಾಮಕ ಸಿಬ್ಬಂದಿ ಬಾಗಿಲು ತೆಗೆದು ನೋಡಿದ್ದಾರೆ. ಆಗ ಮುತ್ತುಲಕ್ಷ್ಮಿ ಮತ್ತು ಇಬ್ಬರು ಮಕ್ಕಳು ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದರು. ಆದರೆ ಮುತ್ತುಲಕ್ಷ್ಮಿ ಸ್ಥಳದಲ್ಲಿಯೇ ಮೃತಪಟ್ಟಿದ್ದಳು. ನಂತರ ಸಿಬ್ಬಂದಿ ಮಕ್ಕಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದರು. ಆದರೆ ಮಾರ್ಗಮಧ್ಯೆಯೇ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರು ಅವರ ಮೃತದೇಹಗಳನ್ನು ಕರೂರಿನ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದು, ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಯುತ್ತಿದೆ. ರಾತ್ರಿ ವೇಳೆ ಫೋನ್ ಚಾರ್ಜ್ ಹಾಕಿದ್ದಾಗ ಮೊಬೈಲ್ ಸ್ಫೋಟಗೊಂಡು ಬೆಂಕಿ ಹೊತ್ತಿಕೊಂಡಿದೆ ಎಂದು ತಿಳಿದು ಬಂದಿದೆ.
ಲಾಕ್‍ಡೌನ್ ಸಮಯದಲ್ಲಿ ಮುತ್ತುಲಕ್ಷ್ಮಿಗೆ ಯಾವುದೇ ಆದಾಯ ಬರುತ್ತಿರಲಿಲ್ಲ. ಇದರಿಂದ ಮುತ್ತುಲಕ್ಷ್ಮಿ ತಮ್ಮ ಸಂಬಂಧಿಕರ ಮನೆಗೆ ಹೋಗಿ ಹಣವನ್ನು ತೆಗೆದುಕೊಂಡು ಬರುವಂತೆ ಪೋಷಕರನ್ನು ಕಳುಹಿಸಿದ್ದಳು ಎಂದು ವರದಿಯಾಗಿದೆ.