– ಖತರ್ನಾಕ್ ಕಳ್ಳ ಹಾಸನ ಪೊಲೀಸರ ಬಲೆಗೆ
ಹಾಸನ: ಒಂದು ವರ್ಷದಿಂದ ಪೊಲೀಸರಿಗೆ ಸಿಗದೆ ತಪ್ಪಿಸಿಕೊಂಡು ಓಡಾಡುತ್ತಿದ್ದ ಖತರ್ನಾಕ್ ಕಳ್ಳನನ್ನು ಹಾಸನ ಪೊಲೀಸರು ಕೊನೆಗೂ ಸೆರೆ ಹಿಡಿದಿದ್ದಾರೆ.
ನಂಜನಗೂಡು ಮೂಲದ ಗಿರೀಶ್ ಬಂಧಿತ ಆರೋಪಿ. ಬಂಧಿತನಿಂದ 35 ಲಕ್ಷ ರೂ. ಮೌಲ್ಯದ ಸುಮಾರು 650 ಗ್ರಾಂ. ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ. ವಿವಿಧ ಜಿಲ್ಲೆಗಳಲ್ಲಿ ನಡೆದ ಸುಮಾರು 10ಕ್ಕೂ ಹೆಚ್ಚು ಕಳ್ಳತನ ಪ್ರಕರಣಗಳಲ್ಲಿ ಗಿರೀಶ್ ಆರೋಪಿಯಾಗಿದ್ದ. ಗಿರೀಶ್ ತುಂಬಾ ಬುದ್ಧಿವಂತಿಕೆಯಿಂದ ಕಳ್ಳತನ ಮಾಡುತ್ತಿದ್ದ. ಹೀಗಾಗಿ ಪೊಲೀಸರಿಗೆ ಈತನನ್ನು ಬಂಧಿಸುವುದು ಸವಾಲಿನ ಕೆಲಸವಾಗಿತ್ತು.
ತಾನು ಕಳ್ಳತನ ಮಾಡಲು ನಿರ್ಧರಿಸಿದ ಏರಿಯಾಕ್ಕೆ ಎರಡು ದಿನ ಮೊದಲೇ ಹೋಗಿ ಸರ್ವೆ ಮಾಡುತ್ತಿದ್ದ ಗಿರೀಶ್, ಯಾವ ಮನೆ ಕಳ್ಳತನ ಮಾಡಬೇಕು ಎಂದು ಮೊದಲೇ ನಿರ್ಧರಿಸಿ ನಂತರ ಕಾರ್ಯಸಾಧಿಸುತ್ತಿದ್ದ. ಪೊಲೀಸರಿಗೆ ಅನುಮಾನ ಬರಬಾರದೆಂದು ಕಳ್ಳತನ ಮಾಡುವ ಸಮಯದಲ್ಲಿ ಆತ ಮೊಬೈಲ್ ಬಳಸುತ್ತಿರಲಿಲ್ಲ. ತನ್ನ ಫಿಂಗರ್‍ಪ್ರಿಂಟ್ ಕೂಡ ಎಲ್ಲಿಯೂ ಸಿಗದಂತೆ ಎಚ್ಚರಿಕೆ ವಹಿಸುತ್ತಿದ್ದ. ಅಷ್ಟೇ ಅಲ್ಲದೆ ಯಾರಿಗೂ ವಿಷ್ಯ ಗೊತ್ತಾಗಬಾರದೆಂದು ಏಕಾಂಗಿಯಾಗಿ ಕಳ್ಳತನ ಮಾಡುತ್ತಿದ್ದ.
ಕಳ್ಳತನ ಮಾಡಿದ ನಂತರ ಬೆಂಗಳೂರಿಗೆ ಹೋಗಿ ನೆಲೆಸುತ್ತಿದ್ದ. ಇಂದು ಶಾಂತಿಗ್ರಾಮ ಟೋಲ್ ಹತ್ತಿರ ಸಂಚರಿಸುತ್ತಿದ್ದಾಗ ಅನುಮಾನಗೊಂಡ ಪೊಲೀಸರು ಈತನನ್ನು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಈತನ ಕಳ್ಳತನದ ಸರಣಿ ಬಗ್ಗೆ ಮಾಹಿತಿ ಬಹಿರಂಗವಾಗಿದೆ. ಅಂತಿಮವಾಗಿ ಆರೋಪಿ ಗಿರೀಶ್‍ನನ್ನು ಹಿಡಿಯುವಲ್ಲಿ ಹಾಸನ ಪೊಲೀಸರು ಯಶಸ್ವಿಯಾಗಿದ್ದು, ತನಿಖಾ ತಂಡವನ್ನು ಹಾಸನ ಎಸ್‍ಪಿ ಶ್ರೀನಿವಾಸ್‍ಗೌಡ ಅಭಿನಂದಿಸಿದ್ದಾರೆ.