– ಕತ್ತು ಹಿಸುಕಿ ಕೊಂದು ಪೊಲೀಸರಿಗೆ ಶರಣಾದ ಯುವಕ
ಲಕ್ನೋ: ಮೊಬೈಲ್ ಖರೀದಿಗೆ 10 ಸಾವಿರ ರೂಪಾಯಿ ನೀಡದ ಮಲತಾಯಿಯನ್ನ ಕೊಲೆಗೈದಿರುವ ಘಟನೆ ಉತ್ತರ ಪ್ರದೇಶದ ಮೀರತ್ ಜಿಲ್ಲೆಯ ಸರ್ದನ್ ವ್ಯಾಪ್ತಿಯಲ್ಲಿ ನಡೆದಿದೆ.
35 ವರ್ಷದ ರೇಷ್ಮಾ ಕೊಲೆಯಾದ ಮಹಿಳೆ. ಕಸ್ಬೆಯ ಇಸ್ಲಾಮಾಬಾದ್ ನಲ್ಲಿ ಕ್ಲಿನಿಕ್ ಇಟ್ಟುಕೊಂಡಿರುವ ಇಬಾದುರ್‍ಖಾನ್ ಕೆಲ ವರ್ಷಗಳ ಹಿಂದೆ ರೇಷ್ಮಾರನ್ನ ಎರಡನೇ ಮದುವೆಯಾಗಿದ್ದರು. ಇಬಾದುರ್ ಖಾನ್ ಪುತ್ರ 19 ವರ್ಷದ ಖೀಜರ್ ಮದ್ಯ ವ್ಯಸನಿಯಾಗಿದ್ದನು. ಹೀಗಾಗಿ ಖೀಜರ್ ನನ್ನು ವ್ಯಸನ ಮುಕ್ತ ಕೇಂದ್ರಕ್ಕೆ ದಾಖಲಿಸಲಾಗಿತ್ತು. ಕೆಲ ದಿನಗಳ ಹಿಂದೆಯೇ ಖೀಜರ್ ಮನೆಗೆ ಹಿಂದಿರುಗಿದ್ದನು.
ಮಂಗಳವಾರ ಮಧ್ಯಾಹ್ನ ಮನೆಗೆ ಬಂದಾಗ ರೇಷ್ಮಾ ಒಬ್ಬರೇ ಇದ್ದರು. ಮೊಬೈಲ್ ಖರೀದಿಸಬೇಕಿದ್ದು, 10 ಸಾವಿರ ನೀಡುವಂತೆ ಕೇಳಿದ್ದಾನೆ. ಆದ್ರೆ ರೇಷ್ಮಾ ಮಗನಿಗೆ ಹಣ ನೀಡಲು ಒಪ್ಪಿಲ್ಲ. ಇದೇ ವಿಷಯಕ್ಕೆ ಇಬ್ಬರ ಮಧ್ಯೆ ವಾಕ್ಸಮರವೇ ನಡೆದಿತ್ತು. ಹಣಕ್ಕೆ ಹಠ ಹಿಡಿದಾಗ ರೇಷ್ಮಾ ಮಗನ ಕಪಾಳಕ್ಕೆ ಹೊಡೆದಿದ್ದಾರೆ.
ಇದರಿಂದ ಕೋಪಗೊಂಡ ಖೀಜರ್ ತಾಯಿಯ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಕೊಲೆಯ ಬಳಿಕ ನೇರವಾಗಿ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ. ಖೀರಜ್ ತಂದೆಯ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.