– ಆರೋಪಿಗಾಗಿ 50ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮರಾ ಪರಿಶೀಲಿಸಿದ ಪೊಲೀಸರು
ನವದೆಹಲಿ: ಬೇಗ ಶ್ರೀಮಂತರಾಗಬೇಕು ಎಂಬ ಉದ್ದೇಶದಿಂದ ಮೊಬೈಲ್ ಕದಿಯಲು ಹೋಗಿ ಪಾಪಿಗಳು ಯುವಕನ್ನೇ ಕೊಲೆ ಮಾಡಿರುವ ಘಟನೆ ನವದೆಹಲಿಯ ಪತ್ಪರ್ ಗಂಜ್ ಪ್ರದೇಶದಲ್ಲಿ ನಡೆದಿದೆ.
ಕಳೆದ ಮಂಗಳವಾರ ರಾತ್ರಿ ಘಟನೆ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ರಾಹುಲ್(18), ಸುಮಿತ್(19) ಹಾಗೂ ಪಿಯೂಶ್(23)ನನ್ನು ಬಂಧಿಸಿದ್ದಾರೆ. 17 ವರ್ಷದ ಯುವಕನ ಮೃತದೇಹ ರಸ್ತೆಯಲ್ಲಿ ಬಿದಿದ್ದನ್ನು ಪತ್ತೆಹಚ್ಚಲಾಗಿದೆ. ಈ ಕುರಿತು ಪೊಲೀಸರಿಗೆ ತಿಳಿಯುತ್ತಿದ್ದಂತೆ ರಾತ್ರಿ 10.30ರ ಸುಮಾರಿಗೆ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದು, ಬಳಿಕ ಎಲ್‍ಬಿಎಸ್ ಆಸ್ಪತ್ರೆಗೆ ಸಾಗಿಸಲಾಗಿದೆ. ಬಳಿಕ ಐಪಿಸಿ ಸೆಕ್ಷನ್ 302 (ಕೊಲೆ) ಪ್ರಕರಣವನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ. ಕೊಲೆಯಾದ ಯುವಕನ ಬಳಿ ಪರ್ಸ್ ಹಾಗೂ ಮೊಬೈಲ್ ಇಲ್ಲದ್ದರಿಂದ ಪೊಲೀಸರಿಗೆ ಗುರುತಿಸಲು ಸಾಧ್ಯವಾಗಿರಲಿಲ್ಲ.
ವ್ಯಕ್ತಿ ಕಾಣೆಯಾಗಿರುವ ಕುರಿತು ದೂರು ದಾಖಲಾಗಿದ್ದರೆ ತಿಳಿಸುವಂತೆ ಜಿಲ್ಲೆಯ ಎಲ್ಲ ಪೊಲೀಸ್ ಠಾಣೆಗಳಿಗೆ ತಿಳಿಸಲಾಗಿತ್ತು. ಬಳಿಕ ಯುವಕನ ಕುಟುಂಬಸ್ಥರು ಆಗಮಿಸಿ ತಮ್ಮ ಮಗ ರೋಹಿತ್ ಆಶಿಶ್ ಎಂದು ಗುರುತಿಸಿದ್ದಾರೆ ಎಂದು ಪೂರ್ವ ಡಿಸಿಪಿ ಜಸ್ಮೀತ್ ಸಿಂಗ್ ಹೇಳಿದ್ದಾರೆ.
ಆಶಿಶ್ ಸೀಮಾಪುರಿ ನಿವಾಸಿಯಾಗಿದ್ದು, ಹಿರಿಯ ನಾಗಕರಿಕರಿಗೆ ನರ್ಸಿಂಗ್ ಅಸಿಸ್ಟೆಂಟ್ ಆಗಿ ಕೆಲಸ ಮಾಡುತ್ತಿದ್ದ. ಬಳಿಕ ಪೊಲೀಸರು ಮಹಿತಿ ಕಲೆ ಹಾಕಿ, ಆಶಿಶ್ ಕೆಲಸ ಮಾಡುವ ಸ್ಥಳ ಹಾಗೂ ಕೃತ್ಯ ನಡೆದ ಸ್ಥಳದ ಸುತ್ತಲಿನ 50ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮರಾಗಳನ್ನು ಪರಿಶೀಲಿಸಿದ್ದಾರೆ. ಅಲ್ಲದೆ ಸುಮಾರು 200ಕ್ಕೂ ಹೆಚ್ಚು ಆಟೋ ಚಾಲಕರನ್ನು ವಿಚಾರಣೆಗೆ ಒಳಪಡಿಸಿದ್ದಾರೆ.
ಈ ರೀತಿಯ ಪ್ರಯತ್ನಗಳಿಂದಾಗಿ ಪೊಲೀಸರು ವಿಶ್ವಾಸಾರ್ಹ ಮಾಹಿತಿಯನ್ನು ಆಧರಿಸಿ ಮೂವರು ಆರೋಪಿಗಳನ್ನು ಗುರುತಿಸಿದ್ದು, ಬಳಿಕ ಬಂಧಿಸಿದ್ದಾರೆ. ವಿಚಾರಣೆ ವೇಳೆ ಮೂವರೂ ಬೇಗ ಹಣ ಸಂಪಾದಿಸುವ ಉದ್ದೇಶದಿಂದ ಕೃತ್ಯ ಎಸಗಿರುವುದಾಗಿ ತಿಳಿಸಿದ್ದಾರೆ.