ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲ ಠಾಣೆಯ ಪೇದೆಗೆ ಕೊರೊನಾ ಸೋಂಕು ಬಂದಿದೆ.
ಮೇ 14ರಂದು ಮಹಾರಾಷ್ಟ್ರದ ರಾಯಗಡದಿಂದ ಬಂದಿದ್ದ ವ್ಯಕ್ತಿಗೆ ಕೊರೊನಾ ಪಾಸಿಟಿವ್ ಆಗಿತ್ತು. ಕ್ವಾರಂಟೈನ್ ಬಗ್ಗೆ ಸರಿಯಾದ ಮಾಹಿತಿ ನೀಡದ ಕಾರಣ ಸೋಂಕಿತ ಠಾಣೆಗೆ ಹೋಗಿದ್ದ. ಆತನ ದ್ವಿತೀಯ ಸಂಪರ್ಕಕ್ಕೆ ಬಂದ ಹಿನ್ನೆಲೆಯಲ್ಲಿ ಇಂದು 42 ವರ್ಷದ ಹೆಡ್ ಕಾನ್‍ಸ್ಟೇಬಲ್ ಅವರಿಗೆ ಪಾಸಿಟಿವ್ ಬಂದಿದೆ.
Advertisement
Advertisement
ಮಹಾರಾಷ್ಟ್ರದಿಂದ ಬಂದಿದ್ದ ವ್ಯಕ್ತಿ ಕ್ವಾರಂಟೈನ್ ನಲ್ಲಿದ್ದು ಮೇ 18 ರಂದು ಪಾಸಿಟಿವ್ ಬಂದಿತ್ತು. ಕ್ವಾರಂಟೈನ್ ಆಗುವುದಕ್ಕೆ ಮೊದಲು ಠಾಣೆಗೆ ಹೋಗಿದ್ದರಿಂದ ಸೋಂಕು ಬಂದಿದೆ. ಮುಂಬೈ ವ್ಯಕ್ತಿಗೆ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಆತನ ಸಂಪರ್ಕಕ್ಕೆ ಬಂದಿದ್ದರಿಂದ ಮೂರು ಮಂದಿ ಪೇದೆಯನ್ನು ಕ್ವಾರಂಟೈನ್ ಮಾಡಲಾಗಿತ್ತು. ಈ ಪೈಕಿ ಓರ್ವ ಪೇದೆಗೆ ಸೋಂಕು ಇರುವುದು ದೃಢಪಟ್ಟಿದೆ.
Advertisement
ಕೊರೊನಾ ಬಂದಿದ್ದು ಹೇಗೆ?
ಸೋಂಕಿತ ಪೇದೆ ಮುಂಬೈ ವ್ಯಕ್ತಿಯ ಜೊತೆ ನೇರ ಸಂಪರ್ಕ ಹೊಂದಿರಲಿಲ್ಲ. ಮುಂಬೈಯಿಂದ ಮೇ 14ರಂದು ಬಂದ ವ್ಯಕ್ತಿಯನ್ನು ಅಂಬ್ಯುಲೆನ್ಸ್ ಚಾಲಕ ಕ್ವಾರೆಂಟೈನ್ ಕೇಂದ್ರಕ್ಕೆ ಕರೆದುಕೊಂಡ ಹೋಗದೇ ಮಾರ್ಗ ಮಧ್ಯೆ ಇಳಿಸಿ ಹೋಗಿದ್ದ. ಇದರಿಂದ ರೊಚ್ಚಿಗೆದ್ದ ವ್ಯಕ್ತಿಯು ಅಂಬ್ಯುಲೆನ್ಸ್ ಚಾಲಕನ ವಿರುದ್ಧ ದೂರು ನೀಡಲು ನೇರವಾಗಿ ವಿಟ್ಲ ಪೊಲೀಸ್ ಠಾಣೆಗೆ ತೆರಳಿದ್ದರು. ಆಗ ಅಲ್ಲಿನ ಓರ್ವ ಪೇದೆಗೆ ತನ್ನ ಆಧಾರ್ ಕಾರ್ಡ್ ಕೊಟ್ಟಿದ್ದ. ಅದನ್ನು ಪರಿಶೀಲನೆ ಮಾಡಿದ ಪೇದೆ ವಾಪಸ್ ನೀಡಿದ್ದರು. ಆದರೆ ಕೈಯನ್ನು ಸ್ವಚ್ಛಗೊಳಿಸದೇ ಯಾವುದೋ ಬೇರೆ ವಿಚಾರ ಮಾತನಾಡಲು ಪೇದೆ ತನ್ನ ಬಳಕೆಯ ಮೊಬೈಲ್ ಅನ್ನು ಠಾಣೆಯ ಮುಖ್ಯ ಪೇದೆಗೆ ಕೊಟ್ಟಿದ್ದರು.
Advertisement
ದೂರು ನೀಡಿದ ಬಳಿಕ ಕ್ವಾರಂಟೈನ್ ಕೇಂದ್ರಕ್ಕೆ ತೆರಳಿದ್ದ ವ್ಯಕ್ತಿಗೆ ನಾಲ್ಕು ದಿನದ ಬಳಿಕ ಅಂದರೆ ಮೇ 18ರಂದು ಸೋಂಕು ದೃಢಪಟ್ಟಿತ್ತು. ಆತನ ಟ್ರಾವೆಲ್ ಹಿಸ್ಟರಿಯಲ್ಲಿ ಇದ್ದ ವಿಟ್ಲ ಠಾಣೆಯ ಪೊಲೀಸರನ್ನು ಕ್ವಾರಂಟೈನ್‍ಗೆ ಒಳಪಡಿಸಿ ಗಂಟಲು ದ್ರವ ಮಾದರಿ ಪರೀಕ್ಷೆ ಮಾಡಲಾಗಿತ್ತು. ಇಂದು ವರದಿ ಬಂದಿದ್ದು ಪೇದೆಯಿಂದ ಮೊಬೈಲ್ ಪಡೆದು ಬಳಸಿದ್ದ ಸೋಂಕಿತನ ಸೆಕೆಂಡರಿ ಸಂಪರ್ಕದಲ್ಲಿದ್ದ ಮುಖ್ಯ ಪೇದೆಗೆ ಕೋವಿಡ್-19 ತಗುಲಿರುವುದು ದೃಢಪಟ್ಟಿದೆ. ಆದರೆ ಸೋಂಕಿತನ ನೇರ ಸಂಪರ್ಕ ಹೊಂದಿದ್ದ ಆಧಾರ್ ಕಾರ್ಡ್ ಪಡೆದ ಪೇದೆಯ ಕೊರೊನಾ ರಿಪೋರ್ಟ್ ವರದಿ ನೆಗೆಟಿವ್ ಬಂದಿದೆ
ಪೇದೆಗೆ ಸೋಂಕು ಬಂದ ಹಿನ್ನೆಲೆಯಲ್ಲಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ನೇತೃತ್ವದಲ್ಲಿ ವಿಟ್ಲ ಪೊಲೀಸ್ ಠಾಣೆಗೆ ಸ್ಯಾನಿಟೈಸರ್ ಸಿಂಪಡಣೆ ಮಾಡಲಾಗಿದೆ.
ಇಂದು ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ ಮಧ್ಯಾಹ್ನದ ಬುಲೆಟಿನ್ ನಲ್ಲಿ ಒಂದು ಪ್ರಕರಣ ಬಂದ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ 58ಕ್ಕೆ ಏರಿಕೆಯಾಗಿದೆ. ಒಟ್ಟು 15 ಮಂದಿ ಬಿಡುಗಡೆಯಾಗಿದ್ದು, 37 ಸಕ್ರಿಯ ಪ್ರಕರಣಗಳಿವೆ. 6 ಮಂದಿ ಮೃತಪಟ್ಟಿದ್ದಾರೆ.