ಬೆಂಗಳೂರು: ಅಕಾಲಿಕ ಮಳೆಯಿಂದ ಜನ ಕಂಗಾಲಾಗಿದ್ದು, ಉತ್ತರ ಕರ್ನಾಟಕ ಭಾಗದಲ್ಲಿ ವರುಣನ ಅಬ್ಬರದಿಂದ ಹಲವು ಅನಾಹುತಗಳು ಸಂಭವಿಸುತ್ತಿವೆ. ಸಿಡಿಲು ಬಡಿದು ಟಿಎಪಿಸಿಎಂಎಸ್ ಅಧ್ಯಕ್ಷ ಸಾವನ್ನಪ್ಪಿದ ಘಟನೆ ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ನಿಡೋಣಿ ಗ್ರಾಮದ ಬಳಿ ನಡೆದಿದೆ.
ಸೋಮಣ್ಣ ಬೀರಪ್ಪ ತೇರದಾಳ(40) ಸಿಡಿಲು ಬಡಿದು ಸಾವಿಗೀಡಾದ ದುರ್ದೈವಿ. 100 ಕುರಿ ಸಾಕಿದ್ದ ಸೋಮಣ್ಣ ಬೀರಪ್ಪ ತೇರದಾಳ, ಮಧ್ಯಾಹ್ನ ಕುರಿ ಕಾಯುವ ಆಳಿನ ಜೊತೆ ನೋಡಲು ಹೋಗಿದ್ದ. ಈ ವೇಳೆ ಮೊಬೈಲ್‍ನಲ್ಲಿ ಮತನಾಡಿ, ಮೊಬೈಲ್ ಜೇಬಿನಲ್ಲಿ ಇಟ್ಟುಕೊಳ್ಳುವಾಗ ಸಿಡಿಲು ಬಡಿದದೆ. ಬಳಿಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಬಬಲೇಶ್ವರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ವಿಜಯಪುರ ಮಾತ್ರವಲ್ಲ ಬೆಳಗಾವಿ, ಬೀದರ್ ಸೇರಿದಂತೆ ಉತ್ತರ ಕರ್ನಾಟಕ ಭಾಗದಲ್ಲಿ ಭಾರೀ ಮಳೆಯಾಗಿದೆ. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ವಿವಿಧೆಡೆ ಮಳೆರಾಯ ಅಬ್ಬರಿಸಿದ್ದು, ಅರ್ಧಗಂಟೆ ಸುರಿದ ಮಳೆಗೆ ಜನರ ಬದುಕು ಮೂರಾಬಟ್ಟೆಯಾಗಿದೆ. ತೆಲಸಂಗ ಗ್ರಾಮದಲ್ಲಿ ಸುರಿದ ಅಕಾಲಿಕ ಮಳೆಗೆ ವಾರದ ಸಂತೆಯಲ್ಲಿ ಜನ ಪರದಾಡಿದ್ದಾರೆ. ಆಲಿಕಲ್ಲು ಸಮೇತ ಮಳೆಯಾಗಿದ್ದರಿಂದ ಕಲ್ಲಂಗಡಿ ಹಾಗೂ ದ್ರಾಕ್ಷಿ ಬೆಳೆ ಹಾನಿಯಾಗಿದೆ. ರಸ್ತೆಗಳಲ್ಲಿ ನೀರು ತುಂಬಿ ಹಳ್ಳದಂತಾಗಿದ್ದು, ಜನಜೀವನ ಅಸ್ತವ್ಯಸ್ಥವಾಗಿದೆ.
ಗಡಿ ಜಿಲ್ಲೆ ಬೀದರ್ ನಲ್ಲಿ ಸಹ ವರುಣನ ಅಬ್ಬರ ಜೋರಾಗಿತ್ತು. ಬಿಸಿಲಿನ ಬೇಗೆಯಿಂದ ಬೆಂದಿದ್ದ ಜನರಿಗೆ ಮಳೆರಾಯ ತಂಪೆರೆದಿದ್ದಾನೆ. ಮಳೆರಾಯನ ಆಗಮನದಿಂದಾಗಿ ಗಡಿ ಜಿಲ್ಲೆಯ ಜನ ಫುಲ್ ಖುಷ್ ಆಗಿದ್ದಾರೆ. ಬೀದರ್, ಚಿಟ್ಟಗುಪ್ಪ, ಹುಮ್ನಬಾದ್, ಹುಲಸೂರ್ ಸೇರಿದಂತೆ ಹಲವೆಡೆ ಮಳೆಯಾಗಿದೆ.