ಮಂಗಳೂರು: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ವತಿಯಿಂದ ಸಂತ ಅಲೋಶಿಯಸ್ ಕಾಲೇಜ್(ಸ್ವಾಯತ್ತ) ಆಶ್ರಯದಲ್ಲಿ ‘ಬ್ಯಾರಿ ದಫ್, ಕೋಲ್ಕಲಿ, ಒಪ್ಪನೆ ಪಾಟ್, ಕೈಕೊಟ್ಟ್ ಪಾಟ್ ಜಾನಪದ ಕಲೆಗಳ ಕೋರ್ಸ್ ತರಬೇತಿಯ ಪ್ರಮಾಣ ಪತ್ರ ವಿತರಣಾ ಹಾಗೂ ಪ್ರತಿಭಾ ಪ್ರದರ್ಶನ ಸಮಾರಂಭವು ಶನಿವಾರ ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನ ಮಾಫೇಯಿ ಸೆಂಟರ್ ಏರಿಕ್ ಮಥಾಯಸ್ ಸಭಾಂಗಣದಲ್ಲಿ ನಡೆಯಿತು. ದಫ್, ಕೋಲ್ಕಲಿ ಬಾರಿಸೋ ಮೂಲಕ ಕಾರ್ಯಕ್ರಮ ಉದ್ಘಾಟಿಸಲಾಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮಂಗಳೂರು ಸಂತ ಅಲೋಶಿಯಸ್ ಕಾಲೇಜಿನ ಪ್ರಾಂಶುಪಾಲ ರೆ.ಡಾ.ಪ್ರವೀಣ್ ಮಾರ್ಟಿಸ್ ಎಸ್.ಜೆ., ಪ್ರಾದೇಶಿಕ ಭಾಷೆಗಳಿಗೆ ಒತ್ತು ನೀಡಿ ನಾವು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದೇವೆ. ಬ್ಯಾರಿ ಅಕಾಡೆಮಿ ಆ ನಿಟ್ಟಿನಲ್ಲಿ ಸ್ತುತ್ಯ ಕಾರ್ಯ ಮಾಡಿದೆ ಎಂದರು.
ಅಕಾಡೆಮಿಯ ಅಧ್ಯಕ್ಷ ರಹೀಂ ಉಚ್ಚಿಲ್ ಮಾತನಾಡಿ, ಬ್ಯಾರಿ ಜಾನಪದ ಕಲೆ ಮರೆಯಾಗಿ ಹೋಗುತ್ತಿದೆ. ಇಂತಹ ಸನ್ನಿವೇಶದಲ್ಲಿ ಈ ಕಲೆಯನ್ನು ಉಳಿಸಿ ಮುಂದಿನ ಜನಾಂಗಕ್ಕಾಗಿ ಉಳಿಸಲು ನಾವು ಸರ್ಟಿಫಿಕೇಟ್ ಕೋರ್ಸನ್ನು ಆರಂಭಿಸಿ ಯಶಸ್ವಿ ಗಳಿಸಿದ್ದೇವೆ. ಈ ಮುಂಚೆ ಕೈಕೊಟ್ಟು, ಒಪ್ಪನೆ, ಕೋಲ್ಕಲಿ ಜಾನಪದ ಹಾಡುಗಳನ್ನು ನಮ್ಮ ಊರಲ್ಲಿ ಕಾರ್ಯಕ್ರಮದಲ್ಲಿ ಪ್ರದರ್ಶಿಸಲು ಕೇರಳದ ಕಲಾವಿದರನ್ನು ಕರೆಯಬೇಕಾಗಿತ್ತು. ಇದೀಗ ಬ್ಯಾರಿ ಅಕಾಡೆಮಿ ಕರ್ನಾಟಕ ರಾಜ್ಯದಲ್ಲಿ ಮೊದಲ ಬಾರಿಗೆ ಬ್ಯಾರಿ ಜಾನಪದ ಕಲೆಗಳ ಬಗೆಗಿನ ಕೋರ್ಸ್ ಆರಂಭಿಸಿ ಹೊಸ ಕಲಾವಿದರನ್ನು ಸೃಷ್ಟಿ ಮಾಡುವ ಜೊತೆಗೆ ಉದ್ಯೋಗಾವಕಾಶ ಸೃಷ್ಟಿಸಿದೆ. ಇನ್ನು ಮುಂದೆ ಅಕಾಡೆಮಿ ನೇತೃತ್ವದಲ್ಲಿ ಮಂಗಳೂರಲ್ಲಿ ಕೋರ್ಸ್ ಪಡೆದ ವಿದ್ಯಾರ್ಥಿಗಳು ತರಬೇತಿ ನೀಡಲಿದ್ದಾರೆ ಎಂದರು.
ಪತ್ರಕರ್ತ ಹಂಝ ಮಲಾರ್ ಜಾನಪದ ಕಲೆಗಳ ಸರ್ಟಿಫಿಕೇಟ್ ಕೋರ್ಸ್ ಮುಗಿಸಿದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿದರು. ಮುಖ್ಯ ಅತಿಥಿಗಳಾಗಿ ಡಾ.ಸಿದ್ದೀಕ್ ವಗ್ಗ, ಸಾಮಾಜಿಕ ಧುರೀಣ ಹಸನ್ ಮುಹಮ್ಮದ್, ತರಬೇತುದಾರ ರಾಯಿಸ್ ಕಣ್ಣೂರು, ದಫ್ ಉಸ್ತಾದ್ ನೂರ್ ಅಹ್ಮದ್ ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ ಬ್ಯಾರಿ ಲಿಪಿಯನ್ನು ಗೂಗಲ್ ಹಾಗೂ ಎಲ್ಲ ಬ್ರೌಸರ್ ಗಳ ಮೂಲಕ ಜಾಲತಾಣದಲ್ಲಿ ಇಂಗ್ಲೀಷ್ ಭಾಷೆಗೆ ಲಿಪ್ಯಾಂತರಣ ಮಾಡಿ ಸಾಧನೆಗೈದ ಸಂತ ಅಲೋಶಿಯಸ್ ಕಾಲೇಜಿನ ವಿದ್ಯಾರ್ಥಿಗಳಾದ ಯು.ಟಿ.ಮೊಹಮ್ಮದ್ ಮಶ್ಫೂಕ್ ಹುಸೈನ್, ಕೆ.ಎ.ಇಸ್ಮಾಯಿಲ್ ಶಫೀಕ್ ಮತ್ತು ಮೆರ್ಲಾಯ್ ಪಿಂಟೋ ಅವರನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಕೋರ್ಸ್ ನ ಸಂಯೋಜಕಿ ಫ್ಲೋರಾ ಕ್ಯಾಸ್ತಲಿನೊ, ಸದಸ್ಯ ಸಂಚಾಲಕ ಕಮರುದ್ದೀನ್ ಸಾಲ್ಮರ, ಅಕಾಡೆಮಿ ರಿಜಿಸ್ಟ್ರಾರ್ ಪೂರ್ಣಿಮಾ, ಹಿರಿಯ ಕವಿ ಹುಸೈನ್ ಕಾಟಿಪಳ್ಳ, ಬ್ಯಾರಿ ಅಕಾಡೆಮಿ ಸದಸ್ಯ ಶಂಶೀರ್ ಬುಡೋಳಿ ಇದ್ದರು. ಉದ್ಘಾಟನಾ ಕಾರ್ಯಕ್ರಮದ ನಂತರ ಸರ್ಟಿಫಿಕೇಟ್ ಕೋರ್ಸ್ ಮುಗಿಸಿದ 33 ವಿದ್ಯಾರ್ಥಿಗಳು ದಫ್, ಕೈಕೊಟ್ಟು ಪಾಟ್, ಕೋಲ್ಕಲಿ, ಒಪ್ಪನೆ ಪಾಟ್ ಜಾನಪದ ಕಲೆಗಳ ಪ್ರತಿಭಾ ಪ್ರದರ್ಶನ ಕಾರ್ಯಕ್ರಮ ನೀಡಿದರು.