ಮುಂಬೈ: ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂಎಸ್ ಧೋನಿ ಅವರಿಗೆ 14ನೇ ಆವೃತ್ತಿಯ ಐಪಿಎಲ್‍ನ ತನ್ನ ಮೊದಲ ಪಂದ್ಯದಲ್ಲೇ 12 ಲಕ್ಷ ರೂಪಾಯಿ ದಂಡ ಬಿದ್ದಿದೆ.
ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಇಳಿದ ಚೆನ್ನೈ ತಂಡ ನಿಗದಿತ ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 188 ರನ್ ಗಳಿಸಿತ್ತು. ಚೆನ್ನೈ ನೀಡಿದ 189 ರನ್ ಗಳ ಗುರಿ ಬೆನ್ನಟ್ಟಿದ ಡೆಲ್ಲಿ ತಂಡ 18.4 ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡು 190ರನ್ ಬಾರಿಸಿ ಗೆಲುವಿನ ನಗೆ ಬೀರಿತು.
ಪಂದ್ಯ ಮುಗಿದ ಬಳಿಕ ಪಂದ್ಯ ಸೋತ ಚೆನ್ನೈ ತಂಡದ ನಾಯಕನಿಗೆ ನಿಗದಿತ ಸಮಯಕ್ಕೆ ಸರಿಯಾಗಿ ಓವರ್ ಎಸೆಯಲು ವಿಫಲವಾದ ಕಾರಣ ಧೋನಿಗೆ ಐಪಿಎಲ್‍ನ ನೀತಿ ಸಂಹಿತೆ 12 ಲಕ್ಷ ರೂಪಾಯಿ ದಂಡ ವಿಧಿಸಿದೆ.
ಕನಿಷ್ಠ-ಓವರ್ ರೇಟ್ ಅಪರಾಧಗಳಿಗೆ ಸಂಬಂಧಿಸಿದಂತೆ ಐಪಿಎಲ್‍ನ ನೀತಿ ಸಂಹಿತೆ ಅಡಿಯಲ್ಲಿ ಚೆನ್ನೈ ತಂಡದ ನಾಯಕ ಧೋನಿ ಅವರಿಗೆ 12 ಲಕ್ಷ ರೂಪಯಿ ದಂಡ ವಿಧಿಸಲಾಗಿದೆ ಎಂದು ಐಪಿಎಲ್ ಆಡಳಿತ ಮಂಡಳಿ ತಿಳಿಸಿದೆ.
ನಿಯಮದ ಪ್ರಕಾರ ಎರಡು ತಂಡಗಳು ಒಂದು ಇನ್ನಿಂಗ್ಸ್ ನ್ನು 90 ನಿಮಿಷಗಳಲ್ಲಿ ಮುಗಿಸಬೇಕು ಇದರಲ್ಲಿ 2 ಟೈಮ್ ಔಟ್ ಕೂಡ ಕೂಡಿರುತ್ತದೆ. ಆದರೆ ಕಳೆದ ಪಂದ್ಯದಲ್ಲಿ ಮೈದಾನದಲ್ಲಿ ಮಂಜು ಇದ್ದ ಕಾರಣ ನಿಗದಿತ ಸಮಯದಲ್ಲಿ ಓವರ್ ಗಳನ್ನು ಎಸೆಯಲು ಸಾಧ್ಯವಾಗದ ಕಾರಣ ಸಿಎಸ್‍ಕೆ ತಂಡದ ನಾಯಕ ಧೋನಿಗೆ ದಂಡ ವಿಧಿಸಲಾಗಿದೆ.
ಮೊದಲ ಬಾರಿ ಈ ಅಪರಾಧ ತಂಡದಿಂದ ಕಂಡುಬಂದ ಕಾರಣ ಕೇವಲ ದಂಡ ಪ್ರಯೋಗ ಮಾಡಲಾಗಿದೆ. ಮುಂದಿನ ಪಂದ್ಯಗಳಲ್ಲಿ ಇದೇ ತಪ್ಪು ಮರುಕಳಿಸಿದರೆ ಒಂದು ಅಥವಾ ಎರಡು ಪಂದ್ಯಗಳಿಂದ ನಾಯಕನನ್ನು ಅಮಾನತುಗೊಳಿಸುವ ಶಿಕ್ಷೆ ಅನುಭವಿಸಬೇಕಾಗುತ್ತದೆ.