– ಕರ್ನಾಟಕ ಕೈಗಾರಿಕಾ ಸೌಲಭ್ಯ ಅಧಿನಿಯಮ 2020ರ ತಿದ್ದುಪಡಿ
– ರಾಜ್ಯಾದ್ಯಂತ ಹೂಡಿಕೆ ಉತ್ತೇಜಿಸಲು ರಾಜ್ಯ ಸಂಪುಟದ ಮಹತ್ವದ ನಿರ್ಣಯ
– ಸುಲಲಿತ ವ್ಯವಹಾರಕ್ಕೆ ನೆರವಾಗಲಿದೆ ಈ ತಿದ್ದುಪಡಿ ಕಾಯ್ದೆ
ಬೆಂಗಳೂರು: ಉದ್ಯಮ ಸ್ಥಾಪನೆಗೆ ಇರುವ ಅಡೆತಡೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಟ್ಟಿರುವ ರಾಜ್ಯ ಸರ್ಕಾರ, “ಮೊದಲು ಉದ್ದಿಮೆ ಆರಂಭಿಸಿ, 3 ವರ್ಷದ ಬಳಿಕ ಪರವಾನಗಿ ಪಡೆಯುವ ವಿಧಾನ” ಜಾರಿಗೊಳಿಸಲು ನಿರ್ಧರಿಸಿದೆ. ಅದಕ್ಕಾಗಿ ‘ಕರ್ನಾಟಕ ಕೈಗಾರಿಕಾ ಸೌಲಭ್ಯ ಕಾಯ್ದೆ- 2002’ಕ್ಕೆ ತಿದ್ದುಪಡಿ ತರಲು ಗುರುವಾರ ಸಚಿವ ಸಂಪುಟ ಒಪ್ಪಿಗೆ ನೀಡಿದೆ.
ಉದ್ಯಮಗಳಿಗೆ ಅನುಕೂಲ ಒದಗಿಸುವ ಜತೆಗೆ ಹೊಸ ಹೂಡಿಕೆಗಳಿಗೆ ಅನುಕೂಲವಾಗುವಂತೆ ನಿಯಂತ್ರಕ ಚೌಕಟ್ಟನ್ನು ಸರಳಗೊಳಿಸಲು ರಾಜ್ಯ ಸರ್ಕಾರ, ಕರ್ನಾಟ ಕೈಗಾರಿಕ (ಸೌಲಭ್ಯ) ಅಧಿನಿಯಮ 2020 ಜಾರಿಗೊಳಿಸಲು ತೀರ್ಮಾನಿಸಿದೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್, “ಕೈಗಾರಿಕಾ ವಲಯದಲ್ಲಿ ಬದಲಾವಣೆ ತರುವ ಐತಿಹಾಸಿಕ ನಿರ್ಧಾರ ಕೈಗೊಳ್ಳಲಾಗಿದೆ. ಕರ್ನಾಟಕದ ಇತಿಹಾಸದಲ್ಲಿ ಇದು ಮಹತ್ವದ ಹೆಜ್ಜೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಸುಲಲಿತ ವ್ಯವಹಾರಕ್ಕೆ ಒತ್ತು ನೀಡಿದ್ದು, ಅದಕ್ಕೆ ಪೂರಕವಾಗಿ ಈ ನಿರ್ಣಯ ಕೈಗೊಳ್ಳಲಾಗಿದೆ. ನಿಯಮಗಳ ಸರಳೀಕರಣ ಮತ್ತು ಕಾರ್ಯವಿಧಾನದ ಅವಶ್ಯಕತೆಗಳನ್ನು ಕಡಿಮೆಗೊಳಿಸುವ ಉದ್ದೇಶದಿಂದ ಈ ಅಧಿನಿಯಮ ಜಾರಿಗೊಳಿಸಾಗುತ್ತಿದೆ. ಇದು ಉದ್ದಿಮೆ, ಹೂಡಿಕೆ ಅನುಮೋದನೆ ಮತ್ತು ಕಾಲಮಿತಿಗೆ ಅನುಗುಣವಾಗಿ ದಾಖಲೆಗಳನ್ನು ಒದಗಿಸಿ ರಾಜ್ಯದಲ್ಲಿ ಹೂಡಿಕೆದಾರ ಸ್ನೇಹಿ ವಾತಾವರಣ ಸಾಧಿಸಲು ಸಹಾಯವಾಗಲಿದೆ” ಎಂದು ಹೇಳಿದರು.
“ದೇಶದಲ್ಲಿ ಗುಜರಾತ್ ಹಾಗೂ ರಾಜಸ್ಥಾನ ರಾಜ್ಯಗಳಲ್ಲಿ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ (ಸ್ಥಾಪನೆ ಮತ್ತು ಕಾರ್ಯಾಚರಣೆಯ ಸೌಲಭ್ಯ) ಅನುಕೂಲಕ್ಕಾಗಿ ಇಂತಹ ಕಾಯ್ದೆಯನ್ನು ಜಾರಿಗೊಳಿಸಲಾಗಿದೆ. ಆದರೆ, ನಮ್ಮ ರಾಜ್ಯದಲ್ಲಿ ಇನ್ನು ಒಂದು ಹೆಜ್ಜೆಯನ್ನು ಮುಂದಿಟ್ಟಿದ್ದು, ಎಲ್ಲಾ ಕೈಗಾರಿಕೆಗಳ ಸ್ಥಾಪನೆಗೂ ಇದು ಅನ್ವಯವಾಗಲಿದೆ. ನಮ್ಮ ಇಲಾಖೆಯ ವತಿಯಿಂದ ರಾಜಸ್ಥಾನ ಮತ್ತು ಗುಜರಾತ್ ರಾಜ್ಯಗಳ ಮೇಲ್ಕಂಡ ಅಧಿನಿಯಮಗಳನ್ನು ಅಧ್ಯಯನ ಮಾಡಿದ್ದು, ವಿವಿಧ ಇಲಾಖೆಗಳೊಂದಿಗೆ ರಾಜ್ಯದ ಕರ್ನಾಟಕ ಕೈಗಾರಿಕಾ (ಸೌಲಭ್ಯ) ಅಧಿನಿಯಮ, 2002 ತಿದ್ದುಪಡಿಯ ಬಗ್ಗೆ ವಿಸ್ತೃತ ಚರ್ಚೆಯನ್ನು ನಡೆಸಲಾಗಿದೆ” ಎಂದು ಹೇಳಿದರು.
ಪ್ರಯೋಜನ ಏನು?
“ರಾಜ್ಯ ಹಾಗೂ ಜಿಲ್ಲಾ ಮಟ್ಟದ ಸಮಿತಿ ಇದ್ದು, ಅಲ್ಲಿ ಉದ್ದಿಮೆ ಸ್ಥಾಪಿಸಲು ಅನುಮತಿ ಪಡೆದ ಕೂಡಲೇ, ನಿರ್ದಿಷ್ಟ ಭೂಮಿ ಗುರುತಿಸಿ ಕಟ್ಟಡ ನಿರ್ಮಾಣಕ್ಕೆ ಒಪ್ಪಿಗೆ ನೀಡಲಾಗುವುದು. ಈ ಅನುಮೋದನೆಯೊಂದಿಗೆ ಉದ್ದಿಮೆದಾರರು ತಕ್ಷಣವೇ ಕಟ್ಟಡ ನಿರ್ಮಾಣ, ಯಂತ್ರಗಳ ಸ್ಥಾಪನೆ ಮುಂತಾದ ಕೆಲಸ ಆರಂಭಿಸಬಹುದು, ಇದಕ್ಕೆ 3 ವರ್ಷದ ಕಾಲವಕಾಶ ನೀಡಲಾಗುವುದು. ಈ ಅವಧಿಯಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿ, ವಹಿವಾಟು ಪರವಾನಗಿ ಸೇರಿದಂತೆ ನಾನಾ ಇಲಾಖೆಗಳಿಂದ ನಿರಾಕ್ಷೇಪಣೆ ಅಥವಾ ಅನುಮತಿ ಪಡೆಯಬಹುದು”ಎಂದು ಅವರು ವಿವರಿಸಿದರು.