ನವದೆಹಲಿ: ಮೊಟ್ಟೆಯ ಮೇಲೆ ಇಟ್ಟಿಗೆ ಬಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ಜಗಳ ಹುಡುಗನೊಬ್ಬನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ದೆಹಲಿಯ ಸಂಗಮ್ ವಿಹಾರ್ ನಲ್ಲಿ ನಡೆದಿದೆ.
ಕೊಲೆ ಆರೋಪಿಯನ್ನು ಫಾರೂಕ್ ಎಂದು ಗುರುತಿಸಲಾಗಿದೆ. ಈತ 16 ವರ್ಷದ ಮೊಹಮ್ಮದ್ ಫಯಾಜ್ ಎಂಬಾತನನ್ನು ಕೊಲೆಗೈದಿದ್ದಾನೆ. ಆರೋಪಿಯನ್ನು ಬಂಧಿಸಿರುವ ಪೊಲೀಸರು, ಕೊಲೆಗೆ ಬಳಸಲಾದ ಡ್ರ್ಯಾಗರ್ ಅನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಈ ಘಟನೆ ಮಂಗಳವಾರ ಬೆಳಗ್ಗೆ ದಕ್ಷಿಣ ದೆಹಲಿಯ ಸಂಗಮ್ ವಿಹಾರ್ ನಲ್ಲಿ ನಡೆದಿದೆ. ಮೃತ ಹುಡುಗ, ತಂದೆ ಹಾಗೂ ಆತನ ಸಹೋದರ ಅಂಗಡಿಯ ಹೊರಗಡೆ ಇಟ್ಟಿಗೆಗಳನ್ನು ಜೋಡಿಸುತ್ತಿದ್ದರು. ಈ ವೇಳೆ ತಾಜ್ ಮೊಹಮ್ಮದ್ ಒಡೆತನದ ಅಂಗಡಿಯ ಹೊರಗಡೆ ಇಟ್ಟಿದ್ದ ಮೊಟ್ಟೆ ಟ್ರೇ ಮೇಲೆ ಇಟ್ಟಿಗೆ ಬಿದ್ದಿದೆ. ಈ ವಿಚಾರ ಸಂಬಂಧ ಎರಡು ಗುಂಪುಗಳ ನಡುವೆ ವಾಗ್ವಾದ ನಡೆದಿದೆ.
ಈ ವೇಳೆ ಹುಡುಗನ ತಂದೆ ಪರಿಹಾರ ನೀಡುವುದಾಗಿ ಭರವಸೆ ನೀಡಿದರು. ಹೀಗಾಗಿ ಸ್ವಲ್ಪ ಸಮಯದವರೆಗೆ ಪರಿಸ್ಥಿತಿ ತಿಳಿಗೊಂಡಿತಾದರೂ, ಅಂಗಡಿಯಾತ ಮತ್ತೆ ಬಾಲಕನ ಜೊತೆ ಕ್ಯಾತೆ ತೆಗೆದನು. ಜಗಳ ತಾರಕಕ್ಕೇರಿದಾಗ ಅಂಗಡಿಯವನು ಕುಟುಂದವರ ಮುಂದೆಯೇ ಹುಡುಗನಿಗೆ ಚಾಕು ಇರಿದಿದ್ದಾನೆ. ಇದರಿಂದ ದಂಗಾದ ಹುಡುಗನ ಕುಟುಂಬದವರು ಆರೋಪಿಗಳನ್ನು ಹಿಡಿಯಲು ಪ್ರಯತ್ನಿಸಿದರು. ಆದರೆ ಆತ ಸ್ಥಳದಿಂದ ಕಾಲ್ಕಿತ್ತನು. ಬಳಿಕ ಇತ್ತ ಗಾಯಗೊಂಡ ಹುಡುಗನನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಆತ ಅದಾಗಲೇ ಮೃತಪಟ್ಟಿದ್ದಾನೆ ಎಂದು ವೈದ್ಯರು ತಿಳಿಸಿದರು.
ಘಟನೆಯ ಕುರಿತು ಸ್ಥಳಿಯ ಸಿಸಿಟಿವಿ ದೃಶ್ಯಗಳನ್ನು ಪೊಲಿಸರು ಪರಿಶೀಲನೆ ನಡೆಸಿದ್ದಾರೆ. ಸದ್ಯ ಆರೋಪಿಯನ್ನು ಬಂಧಿಸಿ, ಪೊಲೀಸರು ವಿಚಾರಣೆ ನಡೆಸಿದ್ದಾರೆ.