ಮಡಿಕೇರಿ: ವಿಶ್ವ ವಿಖ್ಯಾತ ಮೈಸೂರು ದಸರಾದಲ್ಲಿ ಭಾಗವಹಿಸಲು ಕೊಡಗಿನ ನಾಲ್ಕು ಆನೆಗಳು ಆಯ್ಕೆಯಾಗಿವೆ. ಆನೆಗಳ ದೇಹದಾಡ್ರ್ಯ ಮತ್ತು ಆರೋಗ್ಯ ಪರಿಶೀಲನೆ ಮಾಡಿರುವ ವಜ್ಯಜೀವಿ ವೈದ್ಯರು ಮತ್ತು ಅರಣ್ಯ ಇಲಾಖೆ, ಉನ್ನತ ಅಧಿಕಾರಿಗಳು ತಿಂಗಳಾಂತ್ಯಕ್ಕೆ ಆನೆಗಳನ್ನು ಮೈಸೂರಿಗೆ ಕರೆದೊಯ್ಯಲು ಒಪ್ಪಿಗೆ ಸೂಚಿಸಿದ್ದಾರೆ.
ವಿಶ್ವವಿಖ್ಯಾತ ಮೈಸೂರು ದಸರಾಕ್ಕೆ ಮೆರಗು ಅಂದ್ರೆ ಅದು ಜಂಬೂ ಸವಾರಿ. ಆದರೆ ಈ ಬಾರಿ ವಿಶ್ವಕ್ಕೆ ಬಂದೊದಗಿರುವ ಕೊರೊನಾ ಮಹಾಮಾರಿ ಮೈಸೂರು ದಸರಾದ ಜಂಬೂ ಸವಾರಿ ಮೇಲೂ ಕರಿನೆರಳು ಬೀರಿದೆ. ಹೀಗಾಗಿ ಈ ಬಾರಿ ನಡೆಯುತ್ತಿರುವ ಸರಳ ದಸರಾಕ್ಕೆ ಕೊಡಗಿನ ಆನೆ ಶಿಬಿರದ ನಾಲ್ಕು ಆನೆಗಳು ಆಯ್ಕೆಯಾಗಿವೆ.
ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ದುಬಾರೆ ಸಾಕಾನೆ ಶಿಬಿರದಿಂದ ಕಾವೇರಿ, ಗೋಪಿ, ವಿಜಯ ಮತ್ತು ವಿಕ್ರಮ ಆನೆಗಳು ಈ ಬಾರಿಯ ದಸರಾಕ್ಕೆ ಆಯ್ಕೆಯಾಗಿವೆ. ಗೋಪಿ ಮತ್ತು ಕಾವೇರಿ ಆನೆಗಳು ತಲಾ ಒಂಬತ್ತು ಬಾರಿ ಮೈಸೂರು ದಸರಾದಲ್ಲಿ ಭಾಗವಹಿಸಿವೆ. ವಿಕ್ರಮ ಕೂಡ ಆರೇಳು ಬಾರಿ ದಸರಾದಲ್ಲಿ ಜಂಬೂ ಸವಾರಿಯಲ್ಲಿ ಭಾಗವಹಿಸಿದೆ. ವಿಕ್ರಮ ಆನೆಯೂ ಹತ್ತಕ್ಕೂ ಹೆಚ್ಚು ಬಾರಿ ಜಂಬೂ ಸವಾರಿಯಲ್ಲಿ ಭಾಗವಹಿಸಿದೆ. ಹೀಗಾಗಿ ಈ ಆನೆಗಳು ದಸರಾದಲ್ಲಿ ಭಾಗವಹಿಸುವುದು ಸೂಕ್ತವೆಂದು ನಿರ್ಧರಿಸಿ ಈ ತಿಂಗಳ ಅಂತ್ಯದೊಳಗೆ ಆನೆಗಳನ್ನು ಮೈಸೂರಿಗೆ ಸಾಗಿಸಲಿದ್ದಾರೆ.
ಪ್ರತೀ ವರ್ಷ ಕೊಡಗಿನ ದುಬಾರೆ ಆನೆ ಶಿಬಿರದಿಂದ ಏಳು ಆನೆಗಳು ದಸರಾಕ್ಕೆ ಭಾಗವಹಿಸುತ್ತಿದ್ದವು. ಜೊತೆಗೆ ಅಷ್ಟೂ ಆನೆಗಳ ಮಾವುತ, ಕವಾಡಿಗ ಮತ್ತು ಅವರ ಕುಟುಂಬಗಳು ದಸಾರಕ್ಕೆ ಹೋಗುತ್ತಿದ್ದವು. ತಿಂಗಳುಗಟ್ಟಲೆ ಆ ಕುಟುಂಬಗಳು ಮೈಸೂರು ಅರಮನೆ ಆವರಣದಲ್ಲಿದ್ದು ಮೈಸೂರು ದಸರಾದ ಜಂಬೂ ಸವಾರಿಯನ್ನು ಕಣ್ತುಂಬಿಕೊಳ್ಳುತ್ತಿದ್ದವು. ಈ ಬಾರಿ ಅದ್ಯಾವುದಕ್ಕೂ ಅವಕಾಶವೇ ಇಲ್ಲ. ಬದಲಾಗಿ ನಾಲ್ಕು ಆನೆಗಳ ಮಾವುತರು ಮತ್ತು ಕವಾಡಿಗರು ಮಾತ್ರವೇ ಭಾಗವಹಿಸಲಿದ್ದಾರೆ.