ಬೆಂಗಳೂರು: ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವರ್ಗಾವಣೆಯ ಸಾಧ್ಯತೆಗಳಿದ್ದು, ಇಂದು ಸಂಜೆಯೇ ಈ ಕುರಿತು ಅಧಿಕೃತ ಆದೇಶ ಹೊರಬೀಳುವ ಸಾಧ್ಯತೆಗಳು ದಟ್ಟವಾಗಿವೆ.
ಶುಕ್ರವಾರ ಮುಖ್ಯ ಕಾರ್ಯದರ್ಶಿ ರವಿಕುಮಾರ್ ಅವರು ಇಬ್ಬರು ಐಎಎಸ್ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದರು. ಸಭೆಯ ವರದಿಯನ್ನು ಮುಖ್ಯಮಂತ್ರಿಗಳಿಗೆ ರವಿಕುಮಾರ್ ಸಲ್ಲಿಕೆ ಮಾಡಿದ್ದಾರೆ. ಜಿಲ್ಲಾಧಿಕಾರಿಗಳ ಅಧಿಕೃತ ನಿವಾಸದಲ್ಲಿ ಈಜುಕೊಳ ನಿರ್ಮಾಣ ವಿಚಾರವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಹೀಗಾಗಿ ರೋಹಿಣಿ ಸಿಂಧೂರಿ ವರ್ಗಾವಣೆ ಸಾಧ್ಯತೆಗಳಿವೆ.
ಮೈಸೂರು ಡಿಸಿ ಸಿಂಧೂರಿ ಕಾರ್ಯವೈಖರಿ ವಿರುದ್ಧ ಸಿಡಿದೆದ್ದಿರುವ ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್ ರಾಜೀನಾಮೆ ನಿರ್ಧಾರ ಪ್ರಕಟಿಸಿದ್ರು. ಸರ್ಕಾರ ಶಿಲ್ಪಾ ನಾಗ್ ಅವರ ಮನವೊಲಿಕೆಗೆ ಯತ್ನಿಸುತ್ತಿರುವ ಸಂದರ್ಭದಲ್ಲಿ ಹೊಸ ಬೆಳವಣಿಗೆ ಸಂಚಲನಕ್ಕೆ ಕಾರಣವಾಗಿದೆ. ಡಿಸಿ ವರ್ಗಾವಣೆಗೆ ಆಗ್ರಹಿಸಿ ಪಾಲಿಕೆ ಸದಸ್ಯರು ಪ್ರತಿಭಟನೆ ನಡೆಸ್ತಿದ್ದ ಸ್ಥಳಕ್ಕೆ ತೆರಳಿದ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ನನಗೆ ಎರಡು ದಿನ ಸಮಯ ಕೊಡಿ. ಅಷ್ಟರಳೊಗೆ ಸಮಸ್ಯೆ ಬಗೆಹರಿಯದೆ ಇದ್ದರೆ ನನ್ನ ತೀರ್ಮಾನ ಹೇಳುತ್ತೇನೆ. ಜಿಲ್ಲಾಧಿಕಾರಿಯನ್ನು ವರ್ಗಾವಣೆ ಮಾಡಿಸಲು ಆಗದ ಮೇಲೆ ನನಗೇಕೆ ಬೇಕು ಉಸ್ತುವಾರಿ ಸ್ಥಾನ ಎಂದು ಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ: ಮೈಸೂರು ಡಿಸಿ ವರ್ಸಸ್ ಪಾಲಿಕೆ ಆಯುಕ್ತೆ – ಸುತ್ತೂರು ಶ್ರೀಗಳ ಮನವೊಲಿಕೆ ಯಶಸ್ವಿ!?
ಸಚಿವ ಎಸ್‍ಟಿ ಸೋಮಶೇಖರ್ ಅವರ ಈ ಮಾತುಗಳು ದೊಡ್ಡ ಸಂಚಲನಕ್ಕೆ ಕಾರಣವಾಗಿದೆ. ಡಿಸಿ ವರ್ಗಾವಣೆ ಆಗದೆ ಇದ್ದರೆ ಎಸ್.ಟಿ. ಸೋಮಶೇಖರ್ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡುವ ಸಾಧ್ಯತೆಗಳು ಹೆಚ್ಚಿವೆ ಎಂದು ಹೇಳಲಾಗುತ್ತಿದೆ. ಒಂದು ವೇಳೆ ರೋಹಿಣಿ ಸಿಂಧೂರಿ ಮೈಸೂರು ಡಿಸಿಯಾಗಿಯೇ ಮುಂದವರಿದಲ್ಲಿ ಮೈಸೂರು ಉಸ್ತುವಾರಿ ಸಚಿವ ಸ್ಥಾನ ತ್ಯಜೀಸೋಕೆ ಎಸ್.ಟಿ.ಸೋಮಶೇಖರ್ ಮುಂದಾಗಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ. ಇದೇ ವೇಳೆ ಆಯುಕ್ತೆ ಶಿಲ್ಪಾ ನಾಗ್ ಬೆಂಬಲಕ್ಕೆ ಎಸ್‍ಟಿ ಸೋಮಶೇಖರ್ ಗಟ್ಟಿಯಾಗಿ ನಿಂತಿದ್ದಾರೆ. ಇದನ್ನೂ ಓದಿ: ಶಿಲ್ಪಾ ನಾಗ್ ರಾಜೀನಾಮೆ ಬೆನ್ನಲ್ಲೇ ಹೊಸ ಟೆನ್ಶನ್ -ಕಠಿಣ ನಿರ್ಧಾರಕ್ಕೆ ಬಂದ್ರಾ ಜಿಲ್ಲಾ ಉಸ್ತುವಾರಿ ಸಚಿವ?