– 300 ಮಂದಿಗಷ್ಟೇ ಪಾಲ್ಗೊಳ್ಳಲು ಅವಕಾಶ
– ನಾಳೆ ಏನಿರುತ್ತೆ? ಏನಿರಲ್ಲ?
ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಎಂದರೇ ಥಟ್ಟಂತಾ ಕಣ್ಮುಂದೆ ಬರೋದು ಮೈಸೂರಿನ ಪ್ರಮುಖ ಬೀದಿಯಲ್ಲಿ ನಡೆಯೋ ಅದ್ಧೂರಿ ಜಂಬೂ ಸವಾರಿ.. ಈ ಬಾರಿಯೂ ಅಂದರೆ ನಾಳೆ ವಿಜಯದಶಮಿಯಂದು ಜಂಬೂ ಸವಾರಿ ಇದೆ. ಆದ್ರೆ ಮೈಸೂರಿನ ಪ್ರಮುಖ ರಸ್ತೆಗಳಲ್ಲಿ ಅಲ್ಲ. ಕೊರೊನಾ ಕಾರಣದಿಂದ ಕೇವಲ ಅರಮನೆ ಆವರಣಕ್ಕಷ್ಟೇ ಜಂಬೂ ಸವಾರಿ ಸೀಮಿತವಾಗಿ, ಸರಳವಾಗಿ ನಡೆಯಲಿದೆ. ಇದಕ್ಕಾಗಿ ರಾಜ್ಯ ಸರ್ಕಾರ ಸಕಲ ಸಿದ್ಧತೆಗಳನ್ನು ನಡೆಸಿದೆ.
ಸರಳ ದಸರಾ ಹಿನ್ನೆಲೆಯಲ್ಲಿ ಹೆಚ್ಚು ಮಂದಿ ಸೇರಬಾರದು ಎಂದು ಸರ್ಕಾರ ಆದೇಶ ಹೊರಡಿಸಿದೆ. ಇಂದು ಮೈಸೂರು ರಾಜವಂಶಸ್ಥರಾದ ಯದುವೀರ್ ಅರಮನೆಯಲ್ಲಿ ಇಂದು ಆಯುಧಪೂಜೆ ನೆರವೇರಿಸಿದರು. ಪಟ್ಟದ ಆನೆ, ಕುದುರೆ, ಹಸು, ಒಂಟೆ, ರಾಜವಂಶಸ್ಥರು ಬಳಸುವ ವಾಹನ, ಆಯುಧಗಳಿಗೆ ವಿಶೇಷ ಪೂಜೆ ಸಲ್ಲಿಸಿದರು. ಚಂಡಿಕಾ ಹೋಮ ನಡೆಸಿದರು.
ಅರಮನೆಯ ಕೋಡಿ ಸೋಮೇಶ್ವರ ದೇವಸ್ಥಾನದ ಬಳಿ ಜಂಬೂಸವಾರಿ ಗಜಪಡೆಗೆ ಉಸ್ತುವಾರಿ ಮಂತ್ರಿ ಎಸ್.ಟಿ.ಸೋಮಶೇಖರ್ ನೇತೃತ್ವದಲ್ಲಿ ಪೂಜೆ ನೆರವೇರಿತು. ಸೇವಂತಿಗೆ ಹೂಗಳಿಂದ ಸಿಂಗರಿಸಲಾಗಿದ್ದ ಆನೆಗಳಿಗೆ ಮಂತ್ರಿಗಳು ಕಬ್ಬು, ಬಾಳೆಹಣ್ಣು, ತೆಂಗಿನಕಾಯಿ, ಹಣ್ಣು ಬೆಲ್ಲ ತಿನ್ನಿಸಿ ಸತ್ಕರಿಸಿದರು. ನಾಳೆಯ ಜಂಬೂಸವಾರಿ ಹಿನ್ನೆಲೆಯಲ್ಲಿ ಸಾವಿರಕ್ಕೂ ಹೆಚ್ಚು ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ. ಅರಮನೆ ಸುತ್ತಮುತ್ತ 144 ಸೆಕ್ಷನ್ ಜಾರಿಯಲ್ಲಿದೆ. ಪ್ರವಾಸಿಗರ ಸಂಖ್ಯೆ ಎಂದಿಗಿಂತ ಕಡಿಮೆ ಇದೆ.
ನಾಳೆ ಏನಿರುತ್ತೆ? ಏನಿರಲ್ಲ..?
* ಭುವನೇಶ್ವರಿ ದೇವಾಲಯದಲ್ಲಿ ಯದುವೀರ್ ಅವರಿಂದ ಬನ್ನಿಪೂಜೆ.
* ಮಧ್ಯಾಹ್ನ 2.59 ರಿಂದ 3.20ಕ್ಕೆ ಮುಖ್ಯಮಂತ್ರಿಗಳಿಂದ ನಂದಿಧ್ವಜಕ್ಕೆ ಪೂಜೆ.
* ಸಂಜೆ 4.15ರೊಳಗೆ ಮುಖ್ಯಮಂತ್ರಿಗಳಿಂದ ಪುಷ್ಪಾರ್ಚನೆ (ಶುಭ ಕುಂಭ ಲಗ್ನದಲ್ಲಿ)
* ಅರಮನೆ ಆವರಣದಲ್ಲಿ ಜಂಬೂ ಸವಾರಿ ಆರಂಭ.
* ಕೇವಲ 300 ಮೀಟರ್ ಜಂಬೂ ಸವಾರಿಗಷ್ಟೇ ಅವಕಾಶ (ಇಷ್ಟು ವರ್ಷ 5 ಕಿ.ಮೀ. ಬನ್ನಿ ಮಂಟಪದವರೆಗೂ ಇರುತ್ತಿತ್ತು)
* ಜಂಬೂಸವಾರಿ ವೀಕ್ಷಿಸಲು ಕೇವಲ 300 ಮಂದಿಗಷ್ಟೇ ಅವಕಾಶ.
* 2 ಟ್ಯಾಬ್ಲೋ, ಕೆಲವೇ ಜನಪದ ಕಲಾತಂಡಗಳು ಪಾಲ್ಗೊಳ್ಳಲಿವೆ.
* ಬನ್ನಿ ಮಂಟಪದಲ್ಲಿ ಪಂಜಿನ ಕವಾಯತು ಈ ಬಾರಿ ಇರುವುದಿಲ್ಲ .