ಮೈಶುಗರ್ ಖಾಸಗೀಕರಣದಲ್ಲಿ ಅಂಧ್ರದ ಕಂಪನಿಯೊಂದಿಗೆ ಬಿಎಸ್‍ವೈ ಕುಟುಂಬ ಶಾಮೀಲು: ಎಎಪಿ

Public TV
2 Min Read
AAP Nanjegowda My Sugar

– ಖಾಸಗೀಕರಣದ ನೆಪದಲ್ಲಿ ಕಪ್ಪು ಹಣ ಹೂಡಿಕೆಗೆ ಯತ್ನ

ಬೆಂಗಳೂರು: ನಾಲ್ವಡಿ ಕೃಷ್ಣರಾಜ ಒಡೆಯರ್ ರವರು ನಾಡಿನ ರೈತರಿಗಾಗಿ ಆರಂಭಿಸಿದ ಮೈಶುಗರ್ ಸಂಸ್ಥೆಯನ್ನು ಖಾಸಗೀಕರಣ ಮಾಡುವ ನಿರ್ಧಾರವನ್ನು ರಾಜ್ಯ ಸರ್ಕಾರ ಕೈಬಿಡದಿದ್ದರೆ ಭಾರೀ ವಿರೋಧ ಎದುರಿಸಬೇಕಾಗುತ್ತದೆ ಎಂದು ಎಎಪಿಯ ರಾಜ್ಯ ಕಾನೂನು ಘಟಕದ ಅಧ್ಯಕ್ಷ ನಂಜಪ್ಪ ಕಾಳೇಗೌಡರವರು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಂಜಪ್ಪ ಕಾಳೇಗೌಡರವರು, ಮೈಶುಗರ್ ಕಾರ್ಖಾನೆಯನ್ನು ಖಾಸಗಿಯವರಿಗೆ ನೀಡುವುದಿಲ್ಲ, ಸರ್ಕಾರಿ ಸ್ವಾಮ್ಯದಲ್ಲೇ ಉಳಿಸಿಕೊಳ್ಳುತ್ತೇವೆ ಎಂದು ವಿಧಾನಸಭಾ ಅಧಿವೇಶನದಲ್ಲಿ ಸಿ.ಎಂ.ಯಡಿಯೂರಪ್ಪನವರು ಹೇಳಿದ್ದರು. ಆದರೆ ಈಗ ಅವರೇ ಉಲ್ಟಾ ಹೊಡೆದಿದ್ದಾರೆ. ಯಡಿಯೂರಪ್ಪನವರ ಮಕ್ಕಳು, ಮೊಮ್ಮಕಳು ಆಂಧ್ರ ಮೂಲದ ಕಂಪನಿಯೊಂದಿಗೆ ಕೈಜೋಡಿಸಿದ್ದು, ಖಾಸಗೀಕರಣದ ನಂತರ ಭಾರೀ ಪ್ರಮಾಣದ ಕಪ್ಪುಹಣವನ್ನು ಇದರಲ್ಲಿ ಹೂಡಿಕೆ ಮಾಡಲು ನಿರ್ಧರಿಸಿದ್ದಾರೆ. ಮೈಶುಗರ್‍ಗಾಗಿ ಎಎಪಿಯು 2016ರಲ್ಲೇ ಬೃಹತ್ ರ್ಯಾಲಿ ನಡೆಸಿದ್ದು, ಈಗ ಅದರ ಖಾಸಗೀಕರಣವನ್ನು ನೋಡಿ ಕೈಕಟ್ಟಿ ಕೂರುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.

Mysugar 1 medium

ಒಡೆಯರ್‍ರವರು ವಿಶೇಷ ಶ್ರಮವಹಿಸಿ 1933ರಲ್ಲಿ ಮೈಶುಗರ್ ಕಾರ್ಖಾನೆಯನ್ನು ಆರಂಭಿಸಿದರು. ಇದನ್ನು ರಾಜ್ಯದ ಮೊದಲ ಕಾರ್ಖಾನೆ ಎಂದು ಗೌರವದಿಂದ ಕಾಣಲಾಗುತ್ತದೆ. ಸ್ವಾತಂತ್ರ್ಯ ಬಂದು 73 ವರ್ಷವಾದರೂ ರಾಜ್ಯವನ್ನು ಆಳಿದ ಯಾವ ಮುಖ್ಯಮಂತ್ರಿಗೂ ಇಂತಹ ಮತ್ತೊಂದು ಕಾರ್ಖಾನೆಯನ್ನು ಆರಂಭಿಸಲು ಸಾಧ್ಯವಾಗಿಲ್ಲ. ನಾಡಿನ ರೈತರ ಬದುಕನ್ನು ಸುಧಾರಿಸುವುದರಲ್ಲಿ ಮೈಶುಗರ್ ಪಾತ್ರ ಮಹತ್ವದ್ದಾಗಿದೆ. ಕಾರ್ಖಾನೆಯ ನೌಕರರು ಹಾಗೂ ಕಬ್ಬು ಬೆಳೆಗಾರರು ಮೈಶುಗರ್ ಸಂಸ್ಥೆಯೊಂದಿಗೆ ಆರ್ಥಿಕ ಸಂಬಂಧ ಮಾತ್ರವಲ್ಲದೇ ಭಾವನಾತ್ಮಕ ಸಂಬಂಧವನ್ನೂ ಹೊಂದಿದ್ದಾರೆ ಎಂದು ಕಾಳೇಗೌಡರವರು ತಿಳಿಸಿದರು. ಇದನ್ನೂ ಓದಿ: ಮೈಶುಗರ್ ಆರಂಭಕ್ಕೆ ಆಸಕ್ತಿ ತೋರಿಸದ ಸರ್ಕಾರದ ವಿರುದ್ಧ ಆಕ್ರೋಶ

Mysugar 2 medium

ಪ್ರತಿದಿನವೂ 5 ಟನ್ ಸಕ್ಕರೆ ಅರೆಯುವ ಸಾಮರ್ಥ್ಯವನ್ನು ಮೈಶುಗರ್ ಕಾರ್ಖಾನೆ ಹೊಂದಿದೆ. 14 ಸಾವಿರಕ್ಕೂ ಹೆಚ್ಚು ರೈತರು ಇದರ ಷೇರುದಾರರಾಗಿದ್ದಾರೆ. ಈ ಹಿಂದೆ 18ಕ್ಕೂ ಹೆಚ್ಚು ವರ್ಷಗಳ ಕಾಲ ಮೈಶುಗರ್ ಕಂಪನಿಯು ಶೇ. 20ರಿಂದ ಶೇ. 30ರಷ್ಟು ಡಿವಿಡೆಂಡ್ ನೀಡಿದ ಕೀರ್ತಿ ಹೊಂದಿದೆ. 14ಕ್ಕೂ ಹೆಚ್ಚು ಫಾರ್ಮ್‍ಗಳು, ವಿದ್ಯಾಸಂಸ್ಥೆಗಳು ಮತ್ತು ರೈತ ಸಮುದಾಯ ಭವನಗಳು ಸೇರಿ 207 ಎಕರೆಗಿಂತ ಹೆಚ್ಚಿನ ಭೂಮಿಯು ಮೈಶುಗರ್ ಸಂಸ್ಥೆಯ ಬಳಿಯಲ್ಲಿದೆ. ಇಷ್ಟು ಸಮೃದ್ಧವಾದ ಇತಿಹಾಸ ಹೊಂದಿರುವ ಸಂಸ್ಥೆಯು ಸರ್ಕಾರದ ನಿರ್ಲಕ್ಷ್ಯದಿಂದಾಗಿ ಸ್ಥಗಿತಗೊಂಡಿದೆ. ಸರ್ಕಾರವು ಬಂಡವಾಳ ಹೂಡಿ ಸಂಸ್ಥೆಯನ್ನು ಆಧುನೀಕರಣಗೊಳಿಸಬೇಕೇ ಹೊರತು ಖಾಸಗೀಕರಣದ ಹೆಸರಿನಲ್ಲಿ ಮಾರಾಟ ಮಾಡಬಾರದು ಎಂದು ನಂಜಪ್ಪ ಕಾಳೇಗೌಡ ಹೇಳಿದರು. ಇದನ್ನೂ ಓದಿ: ಮೈಶುಗರ್ ಕಾರ್ಖಾನೆ ಖಾಸಗೀಕರಣಕ್ಕೆ ರಾಜವಂಶಸ್ಥ ಯದುವೀರ್ ಬೆಂಬಲ

Share This Article
Leave a Comment

Leave a Reply

Your email address will not be published. Required fields are marked *