– ಹರಿದುಬರುತ್ತಿದೆ ಪವಾಸಿಗರ ದಂಡು
ಚಿಕ್ಕಮಗಳೂರು: ಮುಳ್ಳಯ್ಯನಗಿರಿ, ದತ್ತಪೀಠ ಭಾಗದಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಹೆಬ್ಬೆ ಜಲಪಾತ ಮೈದುಂಬಿ ಧುಮ್ಮಿಕ್ಕುತ್ತಿದೆ.
ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಈ ಜಲಪಾತವಿದ್ದು, ಇದೀಗ ಫಾಲ್ಸ್ ಸೊಬಗಿಗೆ ಪ್ರವಾಸಿಗರು ಮನಸೋತಿದ್ದಾರೆ. ಅಲ್ಲದೆ ಈ ರಮಣೀಯ ದೃಶ್ಯವನ್ನು ಕಣ್ತುಂಬಿಕೊಳ್ಳಲು ಪ್ರವಾಸಿಗರ ದಂಡೇ ಹರಿದುಬರುತ್ತಿದೆ.
ಕಳೆದೊಂದು ವಾರದಿಂದಲೂ ಸುಮಾರು 80 ಅಡಿ ಎತ್ತರದ ಈ ಜಲಪಾತ ಧುಮ್ಮಿಕ್ಕಿ ಹರಿಯುತ್ತಿದ್ದು, ನೀರು ಹಾಲ್ನೋರೆಯಂತೆ ಬೀಳುತ್ತಿದೆ. ಪ್ರವಾಸಿಗರು ತಂಡೋಪತಂಡವಾಗಿ ಇಲ್ಲಿಗೆ ಭೇಟಿ ಮಾಡುತ್ತಿದ್ದು, ಈ ಸುಂದರ ದೃಶ್ಯವನ್ನು ತಮ್ಮ ಕ್ಯಾಮೆರಾಗಳಲ್ಲಿ ಸೆರೆ ಹಿಡಿಯುತ್ತಿದ್ದಾರೆ. ಅಲ್ಲದೆ ಪ್ರವಾಸಿಗರು ಜಲಪಾತದ ನೀರಿನಲ್ಲಿ ಎಂಜಾಯ್ ಮಾಡುತ್ತಿದ್ದಾರೆ.
ಸದ್ಯ ಕಾಫಿನಾಡ ಮಲೆನಾಡು ಭಾಗದಲ್ಲಿ ಮಳೆ ತಗ್ಗಿದ್ದು, ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ, ನಿಡುವಾಳೆ, ಬಾಳೂರು ಸುತ್ತಮುತ್ತ ಭಾರೀ ಗಾಳಿ ಬೀಸುತ್ತಿದೆ. ಮುಳುಗಡೆ ಎಂದೇ ಖ್ಯಾತಿಯಾದ ಹೆಬ್ಬಾಳ ಹಾಗೂ ಕಳಸ ಹಾಗೂ ಹೊರನಾಡು ಸಂಪರ್ಕ ಮುಕ್ತ ಸೇತುವೆ ಸಂಚಾರ ಮುಕ್ತವಾಗಿದೆ. ನಿನ್ನೆ ಸೇತುವೆ ಮೇಲೆ ಎರಡ್ಮೂರು ಅಡಿಯಷ್ಟು ನೀರು ಹರಿಯುತ್ತಿತ್ತು.
ಭದ್ರೆಯ ಹರಿವಿನಲ್ಲಿ ಕೊಂಚ ಇಳಿಕೆ ಕಂಡುಬಂದಿದ್ದು, ಸೇತುವೆಯ ಮೇಲಿನಿಂದ ಎರಡು ಅಡಿ ನೀರು ಇಳಿಕೆಯಾಗಿದೆ. ಶೃಂಗೇರಿ, ಕೊಪ್ಪ, ಎನ್.ಆರ್.ಪುರ ತಾಲೂಕಿನಲ್ಲಿ ಮಳೆಯಬ್ಬರ ಕಡಿಮೆಯಾಗಿದೆ. ಶೃಂಗೇರಿಯಲ್ಲಿ ತುಂಗಾ ನದಿಯ ಹರಿವಿನಲ್ಲಿ ಇಳಿಕೆಯಾಗಿದ್ದು, ಮಲೆನಾಡಿನಲ್ಲಿ ಮಳೆ ಬಿಟ್ಟು-ಬಿಟ್ಟು ಸುರಿಯುತ್ತಿದೆ.