– ನಾನು ನಿರ್ಮಾಪಕನಾಗಿದ್ದಾಗ ಡ್ರಗ್ ಮಾಫಿಯಾ ಇರೋದು ಗೊತ್ತಿಲ್ಲ
ತುಮಕೂರು: ಡ್ರಗ್ ಮಾಫಿಯಾದಿಂದ ಬಂದ ಹಣವನ್ನು ಬಿಜೆಪಿ ಪಕ್ಷ ಮೈತ್ರಿ ಸರ್ಕಾರವನ್ನು ಬೀಳಿಸಲು ಬಳಸಿದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿಯವರು ಗಂಭೀರ ಆರೋಪ ಮಾಡಿದ್ದಾರೆ.
ಇಂದು ತುರುವೇಕೆರೆಯಲ್ಲಿ ಪ್ರತಿಭಟನೆಗೆಂದು ಬಂದಿದ್ದ ಹೆಚ್‍ಡಿಕೆ 144 ಸೆಕ್ಷನ್ ಇರುವ ಹಿನ್ನೆಲೆ ಪ್ರತಿಭಟನೆಯನ್ನು ಕೈಬಿಟ್ಟರು. ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನನ್ನ ಅವಧಿಯಲ್ಲಿ ಡ್ರಗ್ ಮಾಫಿಯಾದ ಬಗ್ಗೆ ಕಠಿಣ ಕ್ರಮ ಕೈಗೊಂಡಿದ್ದೆ ಎಂದು ಹೇಳಿದರು.
ಡ್ರಗ್ ಮಾಫಿಯಾ ಹಣವನ್ನು ಬಿಜೆಪಿ ಪಕ್ಷ ಮೈತ್ರಿ ಸರ್ಕಾರ ಬೀಳಿಸಲು ಬಳಿಸಿಕೊಂಡಿದೆ ಮತ್ತು ಕ್ರಿಕೆಟ್ ಬೆಟ್ಟಿಂಗ್ ನಡೆಸುವವರ ಹಣನ್ನು ಬಂದಿತ್ತು. ನನ್ನ ಅವಧಿಯಲ್ಲಿ ಕಠಿಣ ಕ್ರಮ ಕೈಗೊಂಡಿದ್ದೆ. ಮಾಧ್ಯಮದಲ್ಲಿ ಈ ವಿಚಾರ ಹೆಚ್ಚಿಗೆ ಚರ್ಚೆ ಆಗಬಾರದು. ಇದರಿಂದ ಎಳೆ ಮಕ್ಕಳ ಮೇಲೆ ದುಷ್ಪರಿಣಾಮ ಬೀರುತ್ತದೆ. ನಾನು ಚಿತ್ರ ನಿರ್ಮಾಪಕನಾಗಿದ್ದ ಕಾಲದಲ್ಲಿ ಡ್ರಗ್ ಮಾಫಿಯಾ ಇರೋದು ನನಗೆ ಗೊತ್ತಿಲ್ಲ ಎಂದು ಹೆಚ್‍ಡಿಕೆ ತಿಳಿಸಿದರು.
ಇದೇ ವೇಳೆ ಸಿಎಂ ಪುತ್ರನ ಮೇಲೆ ಭ್ರಷ್ಟಾಚಾರ ಆರೋಪದ ವಿಚಾರವಾಗಿ ಮಾತನಾಡಿದ ಅವರು, 5 ಸಾವಿರ ಕೋಟಿ ಹಗರಣ ಸಿಎಂ ಪುತ್ರನ ಮೇಲೆ ಯಾಕೆ ಬಂತು ನನಗೆ ಗೊತ್ತಿಲ್ಲ. ಈ ದೇಶದಲ್ಲಿ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಹಾಗಿಲ್ಲ. ಜನ ಕೊರೊನಾದಿಂದ ಸಾಯುತ್ತಿದ್ದಾರೆ. ಈ ನಡುವೆ ಭ್ರಷ್ಟಾಚಾರ ಕಟ್ಟಿಕೊಂಡು ನಾನು ಏನ್ ಮಾಡಲಿ. ನೆರೆ ಪರಿಹಾರ ಕೊಡುವುದರಲ್ಲಿ ಸರ್ಕಾರ ಎಡವಿದೆ ಎಂದು ವಾಗ್ದಾಳಿ ನಡೆಸಿದರು.
ಇದೇ ವೇಳೆ ತುರುವೇಕೆರೆ ಶಾಸಕರ ವಿರುದ್ಧ ಪ್ರತಿಭಟನೆ ಮಾಡಲು ಇಲ್ಲಿಗೆ ಬಂದಿದ್ದೆ. ಕೊರೊನಾದಿಂದ ನಾನು ಹೊರಗೆ ಹೆಚ್ಚು ಹೋಗುತ್ತಿಲ್ಲ. ಆದರೆ ಇಲ್ಲಿಗೆ ಬರಬೇಕಾಯ್ತು. ಇಲ್ಲಿನ ರೈತರಿಗೆ ತೊಂದರೆಯಾಗುತ್ತಿದೆ. ಇಲ್ಲಿನ ಶಾಸಕ ರೈತರ ಕಷ್ಟಕ್ಕೆ ಸ್ಪಂದಿಸುತ್ತಿಲ್ಲ. ಇದರ ವಿರುದ್ಧ ಹೋರಾಡಲು ಬಂದಿದ್ದೆ. ಆದರೆ ಅಧಿಕಾರ ದುರುಪಯೋಗ ಪಡಿಸಿಕೊಂಡು 144 ಸೆಕ್ಷನ್ ಜಾರಿ ಮಾಡಿದ್ದಾರೆ. ಹೀಗಾಗಿ ಕೇವಲ ಮನವಿ ಮಾಡಿ ಹೋಗುತ್ತಿದ್ದೇನೆ ಎಂದು ಹೆಚ್‍ಡಿಕೆ ಹೇಳಿದರು.