ಬೆಂಗಳೂರು: ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟುವ ಸಲುವಾಗಿ ಕೈಗೊಂಡಿದ್ದ ಲಾಕ್ ಡೌನ್ ಅನ್ನು ಹಂತಹಂತವಾಗಿ ಸಡಿಲಗೊಳಿಸಲಾಗುತ್ತಿದ್ದು, ಇದೀಗ ಮೇ 17 ರ ಬಳಿಕ ಮತ್ತೆ ಲಾಕ್ ಡೌನ್ ಸಡಿಲಗೊಳಿಸುವ ಬಗ್ಗೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಸುಳಿವು ನೀಡಿದ್ದಾರೆ.
ನಗರದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮೇ 17ರ ನಂತರ ಲಾಕ್ ಡೌನ್ ಬಹುತೇಕ ಸಡಿಲ ಆಗುತ್ತೆ. ಈ ಬಗ್ಗೆ ಕೇಂದ್ರ ಸರ್ಕಾರ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಹೇಳಿದರು. ಈ ಮೂಲಕ ಸೋಮವಾರದಿಂದ ರಾಜ್ಯದಲ್ಲಿ ಲಾಕ್ ಡೌನ್ ಮತ್ತೆ ಸಡಿಲಗೊಳ್ಳಲಿದ್ದು, ಜನ-ಜೀವನ ಸಹಜ ಸ್ಥತಿಗೆ ಮರಳಲಿದೆ.
Advertisement
Advertisement
ಇತ್ತ ನಾಲ್ಕನೇ ಹಂತದ ಲಾಕ್ ಡೌನ್ ವಿಸ್ತರಣೆ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ರಾಜ್ಯ ಸರ್ಕಾರಗಳು ಕೇಂದ್ರ ಸರ್ಕಾರಕ್ಕೆ ವರದಿ ನೀಡಲಿವೆ. ಪ್ರಧಾನಿ ನರೇಂದ್ರ ಮೋದಿ ಸಿಎಂಗಳ ಸಭೆಯಲ್ಲಿ ಲಿಖಿತ ರೂಪದ ವರದಿ ಕೇಳಿದ ಹಿನ್ನೆಲೆಯಲ್ಲಿ ಇಂದು ಕೇಂದ್ರ ಗೃಹ ಇಲಾಖೆಗೆ ಈ ವರದಿಗಳು ಸೇರಲಿದೆ. ಈಗಾಗಲೇ ಕರ್ನಾಟಕ, ಕೇರಳ, ತಮಿಳುನಾಡು, ಉತ್ತರ ಪ್ರದೇಶ ಸೇರಿದಂತೆ ಈಶಾನ್ಯ ಭಾರತದ ಹಲವು ರಾಜ್ಯಗಳು ಕೇಂದ್ರ ಸರ್ಕಾರಕ್ಕೆ ವರದಿ ನೀಡಿದ್ದು, ಇನ್ನೂ ಹಲವು ರಾಜ್ಯಗಳು ವರದಿ ಇಂದು ಸಲ್ಲಿಕೆ ಮಾಡಲಿದೆ. ಈ ವರದಿ ಆಧರಿಸಿ ಕೇಂದ್ರ ಗೃಹ ಇಲಾಖೆ ಹೊಸ ಮಾರ್ಗಸೂಚಿಗಳನ್ನು ಪ್ರಕಟಿಸಬಹುದು.
Advertisement
Advertisement
ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಕೇಂದ್ರ ಸಚಿವರು ಹಾಗೂ ಟಾಸ್ಕ್ ಫೋರ್ಸ್ ನ ಸದಸ್ಯರ ಸಭೆ ಬಳಿಕ ಇಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೇತೃತ್ವದಲ್ಲಿ ಪ್ರಮುಖ ಕೇಂದ್ರ ಸಚಿವರ ಸಭೆ ನಡೆಯಲಿದೆ. ದೆಹಲಿ ನಿರ್ಮಾಣ ಭವನದಲ್ಲಿ ನಡೆಯಲಿರುವ ಸಭೆಯಲ್ಲಿ ಗೃಹ ಸಚಿವ ಅಮಿತ್ ಶಾ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಆರೋಗ್ಯ ಸಚಿವ ಡಾ.ಹರ್ಷವರ್ಧನ್, ನಾಗರಿಕ ವಿಮಾನಯಾನ ಸಚಿವ ಹರಿದೀಪ್ ಸಿಂಗ್ ಪೂರಿ ಸೇರಿದಂತೆ ಹಲವು ಪ್ರಮುಖ ಸಚಿವರು ಭಾಗಿಯಾಗಲಿದ್ದು ಲಾಕ್ ಡೌನ್ ವಿನಾಯತಿ ಮತ್ತು ಮುಂದಿನ ಪರಿಸ್ಥಿತಿಗಳ ನಿರ್ವಹಣೆ ಬಗ್ಗೆ ಚರ್ಚೆ ಮಾಡಲಿದ್ದಾರೆ.