ಮೇ 1ರಿಂದ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ

Public TV
2 Min Read
corona vaccine 1

ನವದೆಹಲಿ: ಮೇ 1ರಿಂದ 18 ವರ್ಷ ಮೇಲ್ಪಟ್ಟ ಎಲ್ಲರೂ ಲಸಿಕೆ ಪಡೆದುಕೊಳ್ಳಲು ಅರ್ಹರು ಎಂದು ಕೇಂದ್ರ ಸರ್ಕಾರ ಹೇಳಿದೆ.

ಸದ್ಯ ಈಗ 45 ವರ್ಷ ಮೇಲ್ಪಟ್ಟವರಿಗೆ ಮಾತ್ರ ಲಸಿಕೆ ಪಡೆದುಕೊಳ್ಳಲು ಅವಕಾಶವಿದೆ. ಆದರೆ ಕೋವಿಡ್ ಸೋಂಕಿತರ ಸಂಖ್ಯೆ ಗಣನೀಯವಾಗಿ ಏರಿಕೆ ಆಗುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ನಿರ್ಬಂಧವನ್ನು ಸಡಿಲಿಕೆ ಮಾಡಿದೆ.

ದೇಶದಲ್ಲಿ ಕೊರೋನಾ ಸೋಂಕು ನಾಗಾಲೋಟದಲ್ಲಿದೆ. ಆಸ್ಪತ್ರೆಗಳಲ್ಲಿ ಟ್ರೀಟ್ಮೆಂಟ್ ಸಿಗ್ತಿಲ್ಲ, ಔಷಧಿಗಳು ಸರಿಯಾಗಿ ಲಭ್ಯ ಆಗುತ್ತಿಲ್ಲ. ದಿನೇ ದಿನೇ ಸಆವು ನೋವು ಹೆಚ್ಚಾಗ್ತಿದೆ. ಎಲ್ಲೆಡೆ ಭಯ ಆತಂಕದ ವಾತಾವರಣ ನಿರ್ಮಾಣವಾಗಿದೆ. ಇಂತಹ ಹೊತ್ತಲ್ಲಿ ಕೇಂದ್ರ ಸರ್ಕಾರ ಮಹತ್ವದ ನಿರ್ಣಯ ತೆಗೆದುಕೊಂಡಿದೆ.

ಹಲವು ರಾಜ್ಯಗಳ ಬೇಡಿಕೆ ಅನ್ವಯ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ನೀಡೋದಾಗಿ ಮೋದಿ ಸರ್ಕಾರ ಘೋಷಿಸಿದೆ. ಮೇ ಒಂದರಿಂದಲೇ 18 ವರ್ಷ ಮೇಲ್ಪಟ್ಟ ಸರ್ವರಿಗೂ ಲಸಿಕೆ ಲಭ್ಯ ಆಗಲಿದೆ.

ಇಂದು ಪ್ರಧಾನಿ ನರೇಂದ್ರ ಮೋದಿ ಮ್ಯಾರಥಾನ್ ಸಭೆ ನಡೆಸಿದರು. ಔಷಧ ಕಂಪನಿಗಳು ಮತ್ತು ತಜ್ಞ ವೈದ್ಯರ ಜೊತೆ ಉನ್ನತ ಮಟ್ಟದ ಸಭೆ ನಡೆಸಿದ ಪ್ರಧಾನಿ ಮೋದಿ, ವಯೋಮಿತಿ ಸಡಿಲಿಕೆಯ ಮೂರನೇ ಹಂತದ ಕೊರೋನಾ ವ್ಯಾಕ್ಸಿನೇಷನ್ ಮಾರ್ಗಸೂಚಿಗೆ ಗ್ರೀನ್ ಸಿಗ್ನಲ್ ನೀಡಿದರು. ಅಲ್ಲದೇ, ಈ ಹಂತದಲ್ಲಿ ವ್ಯಾಕ್ಸಿನ್ ತಯಾರಿ ಕಂಪನಿಗಳು, ತಾವು ತಯಾರಿಸಿದ ಶೇ.50ರಷ್ಟು ಲಸಿಕೆಗಳನ್ನು ಕೇಂದ್ರ ಸರ್ಕಾರಕ್ಕೂ, ಉಳಿದ ಲಸಿಕೆಗಳನ್ನು ರಾಜ್ಯ ಸರ್ಕಾರಗಳಿಗೂ ಮಾರಾಟ ಮಾಡಬಹುದು ಮತ್ತು ಓಪನ್ ಮಾರ್ಕೆಟ್‌ನಲ್ಲಿಯೂ ಬಿಡುಗಡೆ ಮಾಡಬಹುದಾಗಿದೆ. ಅದು ಕೇಂದ್ರ ಸರ್ಕಾರ ನಿಗದಿ ಪಡಿಸಿದ ದರದಲ್ಲಿ ಎಂದು ಕೇಂದ್ರ ಸರ್ಕಾರ ಸಷ್ಟಪಡಿಸಿದೆ.

ಖಾಸಗಿ ಆಸ್ಪತ್ರೆಗಳು ಸರ್ಕಾರ ನಿಗದಿ ಪಡಿಸಿದ ದರದಲ್ಲೇ ಲಸಿಕೆ ನೀಡಬೇಕು. ಪಾರದರ್ಶಕತೆ ಕಾಪಾಡಿಕೊಳ್ಳಬೇಕು ಎಂದು ಖಡಕ್ಕಾಗಿ ತಿಳಿಸಿದೆ. ಮೇ 1ರಿಂದ ಸರ್ವರಿಗೂ ಲಸಿಕೆ ಲಭ್ಯ ಆಗಬೇಕಿರುವ ಹಿನ್ನೆಲೆಯಲ್ಲಿ ಉತ್ಪಾದನೆಗೆ ವೇಗ ನೀಡಲು ಕೇಂದ್ರ ಸರ್ಕಾರ ಸೂಚನೆ ನೀಡಿದೆ. ಅಲ್ಲದೇ, ಲಸಿಕಾ ಕಂಪನಿಗಳಿಗೆ ಹಣಕಾಸಿನ ನೆರವನ್ನು ನೀಡಿದೆ.

ನಿನ್ನೆಯಷ್ಟೇ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಕೇಂದ್ರಕ್ಕೆ ಪತ್ರ ಬರೆದು, ಲಸಿಕೆ ನೀಡುವ ಪ್ರಕ್ರಿಯೆಗೆ ವೇಗ ನೀಡಬೇಕು. ಅಗತ್ಯಬಿದ್ದರೆ 45 ವರ್ಷದೊಳಗಿನ ವ್ಯಕ್ತಿಗಳಿಗೂ ಲಸಿಕೆ ನೀಡುವಂತೆ ಪ್ರಧಾನಿ ಮೋದಿಗೆ ಸಲಹೆ ನೀಡಿದ್ದರು.

ದೇಶದಲ್ಲಿ ಎರಡನೇ ಅಲೆ ತೀವ್ರ ಸ್ವರೂಪ ಪಡೆದ ನಂತ್ರ ಪ್ರಧಾನಿ ಮೋದಿ ನಡೆಸಿದ ಎರಡನೇ ಉನ್ನತಮಟ್ಟದ ಸಭೆ ಇದಾಗಿದೆ. ಆಕ್ಸಿಜನ್ ಮತ್ತು ರೆಮ್‌ಡೆಸಿವರ್ ಪೂರೈಕೆ ಮೇಲೆ ನಿಗಾ ಇರಿಸಲು ದೆಹಲಿ ಸರ್ಕಾರ ಎರಡು ತಂಡ ರಚಿಸಿದೆ.

ಜನವರಿ 16ರಿಂದ ಕೊವ್ಯಾಕ್ಸಿನ್ ಹಾಗೂ ಕೋವಿಶೀಲ್ಡ್ ಲಸಿಕೆ ವಿತರಣಾ ಪ್ರಕ್ರಿಯೆ ಆರಂಭವಾಗಿದ್ದು, ಆರಂಭದಲ್ಲಿ ಆರೋಗ್ಯ ಸಿಬ್ಬಂದಿ ಬಳಿಕ ಮುಂಚೂಣಿಯಲ್ಲಿರುವ ಸರ್ಕಾರಿ ಸಿಬ್ಬಂದಿಗೆ ಲಸಿಕೆ ನೀಡಲಾಗಿತ್ತು. ಮಾರ್ಚ್ 1 ರಿಂದ ಹಿರಿಯ ನಾಗರಿಕರು ಹಾಗೂ 45 ವರ್ಷ ಮೇಲ್ಪಟ್ಟ 2ಕ್ಕೂ ಹೆಚ್ಚು ಕಾಯಿಲೆಯಿಂದ ನರಳುತ್ತಿರುವವರಿಗೆ ಲಸಿಕೆ ನೀಡಲಾಗುತ್ತಿದೆ. ಏ.1ರಿಂದ 45 ವರ್ಷ ಮೇಲ್ಪಟ್ಟ ಎಲ್ಲರಿಗೂ ಕೊರೊನಾ ಲಸಿಕೆ ನೀಡಲಾಗುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *