ನವದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಅವರಿಂದು ಉಗ್ರರ ವಿರುದ್ಧ ಹೋರಾಡಿ ವೀರ ಮರಣ ಹೊಂದಿದ್ದ ಮೇಜರ್ ಆಶೀಶ್ ದಹಿಯಾ ಸೇರಿದಂತೆ 33 ಮಂದಿಗೆ ಶೌರ್ಯ ಚಕ್ರ (Shaurya Chakra) ಹಾಗೂ ಮರಣೋತ್ತರವಾಗಿ ನಾಲ್ಕು ಸೇರಿದಂತೆ 6 ಕೀರ್ತಿ ಚಕ್ರ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು.
ರಾಷ್ಟ್ರೀಯ ರೈಫಲ್ಸ್ 50ನೇ ಬೆಟಾಲಿಯನ್‌ನ ಧೀರ ಯೋಧ, ಜಮ್ಮು & ಕಾಶ್ಮೀರದಲ್ಲಿ ಭಯೋತ್ಪಾದಕರ ವಿರುದ್ಧ ಅಪ್ರತಿಮವಾಗಿ ಹೋರಾಡಿದ್ದರು. ನಾಲ್ವರು ಉಗ್ರರನ್ನು ಕೊಂದು, 3 ಐಇಡಿಗಳನ್ನು ನಿಷ್ಕ್ರಿಯಗೊಳಿಸಿದ್ದರು. 2022ರಿಂದ ಈವರೆಗೆ 5 ಅತ್ಯಂತ ಅಪಾಯಕಾರಿ ಆಪರೇಷನ್‌ಗಳಲ್ಲಿ ಭಾಗಿಯಾಗಿದ್ದರು. ಅವರ ಈ ಪಾತ್ರವನ್ನು ಗೌರವಿಸುವ ಮೂಲಕ ರಾಷ್ಟ್ರಪತಿ ದ್ರೌಪದಿ ಮುರ್ಮು ಶೌರ್ಯ ಚಕ್ರ ಪ್ರಶಸ್ತಿಯನ್ನು ನೀಡಿದ್ದಾರೆ.
LIVE: President Droupadi Murmu presents Gallantry Awards in Defence Investiture Ceremony-2025 (Phase-1) https://t.co/oxmUBkxkDw
— President of India (@rashtrapatibhvn) May 22, 2025
ಇನ್ನೂ ಕೀರ್ತಿ ಚಕ್ರವು (Kirti Chakra) ಭಾರತದ 2ನೇ ಅತ್ಯುನ್ನತ ಶಾಂತಿ ಶೌರ್ಯ ಪ್ರಶಸ್ತಿಯಾಗಿದೆ. ಸಿಖ್ ಲೈಟ್ ಇನ್‌ಫ್ಯಾಂಟ್ರಿಯ ಕರ್ನಲ್ ಮನ್ಪ್ರೀತ್ ಸಿಂಗ್, ರಾಷ್ಟ್ರೀಯ ರೈಫಲ್ಸ್‌ನ ಇತರ ಇಬ್ಬರು ಸೇನಾ ಸಿಬ್ಬಂದಿ ಮತ್ತು ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಅಧಿಕಾರಿಗೆ ಮರಣೋತ್ತರವಾಗಿ ಕೀರ್ತಿ ಚಕ್ರವನ್ನು ನೀಡಲಾಗಿದೆ.
ರಾಷ್ಟ್ರಪತಿ ಭವನದಲ್ಲಿ ನಡೆದ ರಕ್ಷಣಾ ಪುರಸ್ಕಾರ ಸಮಾರಂಭದಲ್ಲಿ ಸಶಸ್ತ್ರ ಪಡೆಗಳ ಸರ್ವೋಚ್ಚ ಕಮಾಂಡರ್ ಆಗಿರುವ ರಾಷ್ಟ್ರಪತಿ ಮುರ್ಮು ಅವರು 6 ಮರಣೋತ್ತರ ಸೇರಿದಂತೆ 33 ಶೌರ್ಯ ಚಕ್ರ ಪ್ರಶಸ್ತಿಗಳನ್ನು ಸಶಸ್ತ್ರ ಪಡೆಗಳು, ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳು ಮತ್ತು ಜಮ್ಮು ಮತ್ತು ಕಾಶ್ಮೀರದ ಪೊಲೀಸರ ಸಿಬ್ಬಂದಿಗೆ ಪ್ರದಾನ ಮಾಡಿದರು ಎಂದು ರಕ್ಷಣಾ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.
56 ರಾಷ್ಟ್ರೀಯ ರೈಫಲ್ಸ್‌ನ ಮರಾಠಾ ಲೈಟ್ ಇನ್‌ಫ್ಯಾಂಟ್ರಿಯ ಮೇಜರ್ ಮಲ್ಲ ರಾಮ ಗೋಪಾಲ್ ನಾಯ್ಡು ಮತ್ತು 22 ರಾಷ್ಟ್ರೀಯ ರೈಫಲ್ಸ್‌ನ ಪಂಜಾಬ್ ರೆಜಿಮೆಂಟ್‌ನ ಮೇಜರ್ ಮಂಜಿತ್ ಅವರು ಕೀರ್ತಿ ಚಕ್ರವನ್ನು ಪಡೆದಿದ್ದಾರೆ.