ಬೆಂಗಳೂರು: ಮೇಕೆದಾಟು ಯೋಜನೆ ವಿರೋಧಿಸಿ ತಮಿಳುನಾಡು ಸಿಎಂ ಸ್ಟಾಲಿನ್ ಅವರು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಪತ್ರ ಬರೆದ ಬೆನ್ನಲ್ಲೆ ಮೇಕೆದಾಟು ಆರಂಭ ಮಾಡುವುದಾಗಿ ಯಡಿಯೂರಪ್ಪ ಮಾಧ್ಯಮ ಪ್ರಕಟನೆಯ ಮೂಲಕ ಘೋಷಿಸಿದ್ದಾರೆ.
ಪ್ರಕಟನೆಯಲ್ಲಿ ಏನಿದೆ?
ಎರಡು ರಾಜ್ಯಗಳ ನಡುವಿನ ಸೌಹಾರ್ದತೆಯ ಸಲುವಾಗಿ ತಮಿಳುನಾಡು ರಾಜ್ಯದ ಮುಖ್ಯಮಂತ್ರಿಯವರಿಗೆ ಪತ್ರವನ್ನು ಬರೆಯಲಾಗಿತ್ತು. ಮೇಕೆದಾಟು ಯೋಜನೆಯನ್ನು ಶೀಘ್ರವಾಗಿ ಅನುಷ್ಠಾನಗೊಳಿಸುವ ದೃಷ್ಟಿಯಿಂದ ಹಾಗೂ ಈ ಯೋಜನೆಯ ನಿರ್ಮಾಣದಿಂದ ಎರಡು ರಾಜ್ಯಗಳಿಗೆ ಅನುಕೂಲವಾಗುವ ಅಂಶಗಳನ್ನು ತಿಳಿಯಪಡಿಸಲಾಗಿತ್ತು. ಆದರೆ ತಮಿಳುನಾಡು ಸರ್ಕಾರವು ಈ ಅಂಶಗಳನ್ನು ಅರ್ಥಮಾಡಿಕೊಳ್ಳದೆ ಈ ಯೋಜನೆಯಿಂದ ತಮ್ಮ ರಾಜ್ಯಕ್ಕೆ ತೊಂದರೆಯಾಗುತ್ತದೆ ಎಂದು ವ್ಯಾಖ್ಯಾನಿಸಿದೆ. ಇದನ್ನೂ ಓದಿ: ಮೇಕೆದಾಟಿಗೂ ತಮಿಳುನಾಡು ಕ್ಯಾತೆ ಯಾಕೆ? ಯೋಜನೆಯಿಂದ ರಾಜ್ಯಕ್ಕಾಗುವ ಲಾಭ ಏನು?
ಬೆಂಗಳೂರು ನಗರಕ್ಕೆ ಕುಡಿಯುವ ನೀರನ್ನು 4,75 ಟಿಎಂಸಿ ನೀರನ್ನು ಸರ್ವೋಚ್ಚ ನ್ಯಾಯಾಲಯವು ಆದೇಶಿಸಿದ್ದು, ಸದರಿ Consumptive ಪ್ರಮಾಣವು ಬಳಕೆಯಾಗಿದ್ದು, ಈ ಪ್ರಮಾಣವನ್ನು ಉಪಯೋಗಿಸಿಕೊಳ್ಳಲು 23.75 ಟಿಎಂಸಿ ನೀರಿನ ಪ್ರಮಾಣವನ್ನು ಸಂಗ್ರಹಿಸಿ ಪೂರೈಸಬೇಕಾಗಿರುತ್ತದೆ. ಆದರೆ, ತಮಿಳುನಾಡು ರಾಜ್ಯಕ್ಕೆ ಈ ಯೋಜನೆಯಿಂದ ಯಾವುದೇ ತೊಂದರೆಯಾಗವುದಿಲ್ಲ, ವಾಸ್ತವಿಕವಾಗಿ ನೀರಿನ ಹರಿವಿನಲ್ಲಿ ಅನುಕೂಲವಾಗುತ್ತದೆ. ಇದನ್ನು ಸರಿಯಾಗಿ ಅರ್ಥೈಸಿಕೊಳ್ಳದೆ ರಾಜಕೀಯ ಕಾರಣಗಳಿಗೆ ವಿರೋಧಿಸುತ್ತದೆ. ಈ ಕುರಿತು 2018ರಲ್ಲಿ ತಮಿಳುನಾಡು ರಾಜ್ಯವು ದಾವೆಯನ್ನು (ಮಿಸಲೇನಿಯಸ್ ಅಪ್ಲಿಕೇಷನ್) ಸಲ್ಲಿಸಿದೆ. ಆದರೆ, ಯೋಜನೆಯನ್ನು ಅನುಷ್ಠಾನಗೊಳಿಸಲು ಯಾವುದೇ ಅಡೆತಡೆ ಇರುವುದಿಲ್ಲ.
ಯೋಜನೆಯನ್ನು ರಾಜ್ಯ ಸರ್ಕಾರವು ಅನುಷ್ಠಾನಗೊಳಿಸಲು ಅಗತ್ಯವಿರುವ ತೀರುವಳಿಗಳನ್ನು ಪಡೆಯಲು ಕ್ರಮಕೈಗೊಳ್ಳಲಾಗಿದ್ದು, ಶೀಘ್ರವಾಗಿ ತೀರುವಳಿಗಳನ್ನು ಪಡೆದು ಯೋಜನೆಯನ್ನು ಅನುಷ್ಠಾನಗೊಳಿಸಲಾಗುವುದು. ಕರ್ನಾಟಕ ರಾಜ್ಯವು ಕಾವೇರಿ ನದಿ ಪಾತ್ರದಲ್ಲಿ ನೀರು ಬಳಸಿಕೊಳ್ಳಲು ಆಡಳಿತಾತ್ಮಕ ಹಾಗೂ ಕಾನೂನಾತ್ಮಕ ಕ್ರಮಗಳನ್ನು ಕೈಗೊಳ್ಳುವುದು ಮತ್ತು ಮೇಕೆದಾಟು ಯೋಜನೆಯನ್ನು ಪ್ರಾರಂಭಿಸಲಾಗುವುದು.